ಕೊಡಗಿನ ಬಿಜೆಪಿ ಕಾರ್ಯಕರ್ತ ಬೆಂಗಳೂರಿನಲ್ಲಿ ಆತ್ಮಹತ್ಯೆ

| Published : Apr 05 2025, 12:46 AM IST

ಸಾರಾಂಶ

ಆತ್ಮಹತ್ಯೆಗೂ ಮೊದಲು ವಿನಯ್, ಡೆತ್ ನೋಟ್ ಬರೆದಿಟ್ಟಿದ್ದು, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರೊಬ್ಬರ ಹೆಸರನ್ನು ಉಲ್ಲೇಖಿಸಿ ವಿನಾಕಾರಣ ನನ್ನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಇದರಿಂದ ಮನನೊಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡೆತ್‌ನೋಟಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರೊಬ್ಬರ ಹೆಸರು ಉಲ್ಲೇಖ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಬಿಜೆಪಿ ಕಾರ್ಯಕರ್ತ, ಸೋಮವಾರಪೇಟೆಯ ಗೋಣಿಮರೂರು ಮೂಲದ ವಿನಯ್ ಸೋಮಯ್ಯ(39) ಎಂಬವರು ಬೆಂಗಳೂರಿನ ನಾಗವಾರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೂ ಮೊದಲು ವಿನಯ್, ಡೆತ್ ನೋಟ್ ಬರೆದಿಟ್ಟಿದ್ದು, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರೊಬ್ಬರ ಹೆಸರನ್ನು ಉಲ್ಲೇಖಿಸಿ ವಿನಾಕಾರಣ ನನ್ನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಇದರಿಂದ ಮನನೊಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೃತ ವಿನಯ್ ಸೋಮಯ್ಯ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆತ್ಮಹತ್ಯೆಗೆ ಕಾರಣಕರ್ತರಾದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದೆ.

ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ:

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಶನಿವಾರ ಬೆಳಗ್ಗೆ 11.30ಕ್ಕೆ ವಿನಯ್ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ದೇವಕಿ ಹಾಘೂ ದಿ.ಸೋಮಯ್ಯ ದಂಪತಿಯ ನಾಲ್ವರು ಪುತ್ರರಲ್ಲಿ ವಿನಯ್ ಮೂರನೆಯವರು. ಅಣ್ಣಂದಿರಾದ ಗಗನ್, ಜೀವನ್ ಹಾಗೂ ವಿನಯ್ ಮತ್ತು ವಿವೇಕ್ ಅವಳಿ ಮಕ್ಕಳು. ವಿನಯ್, ಪತ್ನಿ ಶೋಭಿತಾ ಹಾಗೂ ಮಗಳು ಸಾಧ್ವಿಯನ್ನು ಅಗಲಿದ್ದಾರೆ.

ವಿನಯ್ ತಮ್ಮ ವಿವೇಕ್ ಸುದ್ದಿಗಾರರೊಂದಿಗೆ ಮಾತನಾಡಿ, ಕೇಸಿನ ಸಂದರ್ಭ ಕೊಡಗು ಬಿಜೆಪಿಯವರು ಸಹಕಾರ ಕೊಟ್ಟಿದ್ದರು. ಪೋಸ್ಟ್ ಹಾಕುವುದಕ್ಕೂ ಕೇವಲ 5 ದಿನಗಳ ಹಿಂದೆ ವಿನಯ್ ಅಡ್ಮಿನ್ ಆಗಿದ್ದ. ಆ ಪ್ರಕರಣದಲ್ಲಿ ವಿನಯ್ ಅರೆಸ್ಟ್ ಆಗಿರಲಿಲ್ಲ. ಕೇಸು ಆದ್ಮೇಲೆ ಬೇಲ್ ಪಡೆದುಕೊಂಡು ಹೊರಗಿದ್ದರು. ಯುಗಾದಿ ಹಬ್ಬಕ್ಕೆ ಊರಿಗೆ ಬಂದು ಸೋಮವಾರ ಬೆಂಗಳೂರಿಗೆ ಹೋಗಿದ್ದರು ಎಂದು ಹೇಳಿದರು.

ದೂರು ದಾಖಲಾಗಿತ್ತು:

ಕಳೆದ ಮೂರು ತಿಂಗಳ ಹಿಂದೆ ವಿನಯ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೊಡಗು ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಶಾಸಕ ಪೊನ್ನಣ್ಣ ವಿರುದ್ಧ ಅವಹೇಳನ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು.

ವಾಟ್ಸಾಪ್ ಗ್ರೂಪಿನ ಅಡ್ಮಿನ್ ಆಗಿದ್ದ ವಿನಯ್, ಇತರೆ ಇಬ್ಬರ ವಿರುದ್ಧ ಕಾಂಗ್ರೆಸ್ ಮುಖಂಡ ತನ್ನೀರ ಮೈನಾ ದೂರು ನೀಡಿದ್ದರು.