ಬಿಜೆಪಿ ಕಾರ್ಯಕರ್ತರನ್ನು ಯಾವುದೇ ಅನ್ಯ ಮಾರ್ಗಗಳ ಮೂಲಕ ಮಣಿಸಲು ಅಸಾಧ್ಯ ಎಂದು ಮಾಜಿ ಸಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ಹಾವೇರಿ: ಕಾಂಗ್ರೆಸ್ ತನ್ನ ದುರಾಡಳಿತ ನೀತಿಯಿಂದ ನಮ್ಮ ಕಾರ್ಯಕರ್ತರನ್ನು ಕುಗ್ಗಿಸಲು ಪ್ರಯತ್ನಿಸಿದರೂ ಕಾರ್ಯಕರ್ತರು ಕಿಂಚಿತ್ತೂ ಎದೆಗುಂದಿಲ್ಲ. ಇದಕ್ಕೆ ಮೂಲ ಕಾರಣ ನಮ್ಮ ಪಕ್ಷ ಕಾರ್ಯಕರ್ತರನ್ನು ದೇಶಪ್ರೇಮ ಹಾಗೂ ಸೈದಾಂತಿಕ ನೆಲೆಗಟ್ಟಿನ ಮೇಲೆ ಬೆಳೆಸುತ್ತದೆ. ಹೀಗಾಗಿ, ಬಿಜೆಪಿ ಕಾರ್ಯಕರ್ತರನ್ನು ಯಾವುದೇ ಅನ್ಯ ಮಾರ್ಗಗಳ ಮೂಲಕ ಮಣಿಸಲು ಅಸಾಧ್ಯ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಂಡಲಶಃ ಸಂಘಟನಾತ್ಮಕ ಸಭೆ ಉದ್ಘಾಟಿಸಿ ಮಾತನಾಡಿದರು.ರಾಜ್ಯಾದ್ಯಂತ ಜಿಲ್ಲಾವಾರು, ನಂತರ ಪ್ರತಿ ಜಿಲ್ಲೆಗಳಲ್ಲಿ ಮಂಡಲಶಹ ಸಭೆ ನಡೆಸಲಾಗುತ್ತಿದೆ. ನಮ್ಮ ಪಕ್ಷ ರಾಜ್ಯದಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿರಬಹುದು. ಆದರೆ, ಸಂಘಟನಾತ್ಮಕವಾಗಿ ಪ್ರಬಲವಾಗಿದೆ. ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿತ್ತು. ಆದರೆ, ಕಾಂಗ್ರಸ್ ಜನರಿಗೆ ಸುಳ್ಳು ಭರವಸೆ ನೀಡುವ ಮೂಲಕ ಬಹುಮತ ಪಡೆದಿದೆ. ಆದರಿಂದು ಜನರು ದಿನ ನಿತ್ಯದ ಖರ್ಚು ನಿಭಾಯಿಸಲು ನರಳಾಡುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಪಕ್ಷದ ದುಷ್ಟ ರಾಜನೀತಿ. ಹೀಗಾಗಿ, ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿಫಲತೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹಲವಾರು ಜನಪ್ರಿಯ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಸ್ಪಂದನೆ ಇದೆ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಜನ ಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ಯೋಜನೆಗಳ ಮೂಲಕ ಜನರನ್ನು ಲೂಟಿ ಹೊಡಿಯುತ್ತಿರುವುದರ ಬಗ್ಗೆ ಜನಜಾಗೃತಿ ಮೂಡಿಸಬೇಕು. ಜಿಲ್ಲೆಯ ಪ್ರತಿ ಕಾರ್ಯಕರ್ತರು ಬೂತ್‌ಗಳಲ್ಲಿ ಪ್ರವಾಸ ಕೈಗೊಂಡು ಜನರನ್ನು ಎಚ್ಚರಗೊಳಿಸಬೇಕು. ಜನರ ಸಹಕಾರ ಪಡೆದಾಗ ಮಾತ್ರ ನಮ್ಮ ಸಂಘಟನೆ ಮತ್ತಷ್ಟು ಪ್ರಬಲವಾಗಲು ಸಾಧ್ಯ ಎಂದರು.ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಈಗಾಗಲೇ ಹಲವಾರು ಕಾರ್ಯಕ್ರಮಗಳ ಮೂಲಕ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ವಿಫಲತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪಕ್ಷದ ಸರ್ವ ಪದಾಧಿಕಾರಿಗಳು ಹೆಚ್ಚಿನ ಸಮಯವನ್ನು ಪಕ್ಷಕ್ಕಾಗಿ ನೀಡಿ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತವಾಗಿಸುವ ಪಣತೊಡಬೇಕು. ಸಂಘಟನೆಗೆ ಪೂರಕವಾದ ಚಟುವಟಿಕೆ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಜಿಲ್ಲೆಯ ಕೋರ್ ಕಮಿಟಿ ಸಭೆ ಜರುಗಿತು. ಕೋರ್ ಕಮೀಟಿ ಸಭೆಯಲ್ಲಿ ಪಕ್ಷ ಸಂಘಟನೆಗೆ ಪೂರಕವಾದ ವಿವಿಧ ನೀತಿ ನಿರ್ಣಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ವಿಪ ಮಾಜಿ ಸದಸ್ಯ ಡಿ.ಎಂ. ಸಾಲಿ, ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ಭರತ ಬೊಮ್ಮಾಯಿ, ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕರಾದ ಬೋಜರಾಜ್ ಕರೂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮಂಜುನಾಥ ಗಾಣಿಗೇರ ಹಾಗೂ ವಿವಿಧ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಾಲಿ, ಮಾಜಿ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.