ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು
ಕನ್ನಡಪ್ರಭ ವಾರ್ತೆ ಕಾರವಾರಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ವಿಜಯ ಸಾಧಿಸಿದ ಹಿನ್ನೆಲೆ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರು ಭರ್ಜರಿ ವಿಜಯೋತ್ಸವ ಆಚರಿಸಿದರು. ನಗರದ ಪ್ರಮುಖ ಕೇಂದ್ರವಾದ ಸವಿತಾ ಸರ್ಕಲ್‌ನಲ್ಲಿ ಜಮಾಯಿಸಿದ ಕಾರ್ಯಕರ್ತರು, ಪರಸ್ಪರ ಸಿಹಿ ಹಂಚುವ ಮೂಲಕ ಸಂಭ್ರಮ ಹಂಚಿಕೊಂಡರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ್ ನೇತೃತ್ವದಲ್ಲಿ ನಡೆದ ಈ ಸಂಭ್ರಮಾಚರಣೆಯಲ್ಲಿ ಕಾರವಾರ ನಗರ ಮತ್ತು ಗ್ರಾಮೀಣ ಘಟಕದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೇಸರಿ ಪತಾಕೆ ಮುಗಿಲೆತ್ತರಕ್ಕೆ ಹಾರಾಡಿರುವುದು ಪಕ್ಷದ ಸಂಘಟನಾ ಶಕ್ತಿಗೆ ಸಂದ ಜಯ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಪಟಾಕಿ ಸಿಡಿಸಿ, ಜಯಘೋಷ ಹಾಕುವ ಮೂಲಕ ಸವಿತಾ ಸರ್ಕಲ್ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು.ಈ ಸಂದರ್ಭ ಮಾತನಾಡಿದ ರೂಪಾಲಿ ನಾಯ್ಕ್, ದೇಶದ ಜನತೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ ಹಾಗೂ ದೂರದರ್ಶಿತ್ವದ ನಾಯಕತ್ವಕ್ಕೆ ಮನ್ನಣೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿನ ಈ ಐತಿಹಾಸಿಕ ಗೆಲುವು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಬಿಜೆಪಿಯ ಅಲೆ ಮತ್ತಷ್ಟು ಜೋರಾಗಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಸಂಭ್ರಮಾಚರಣೆಯಲ್ಲಿ ಬಿಜೆಪಿ ನಗರ ಅಧ್ಯಕ್ಷ ನಾಗೇಶ್ ಕುರುಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ರವಿರಾಜ್ ಅಂಕೋಲೆಕರ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಉಳಿದಂತೆ ಪ್ರಮುಖರಾದ ಮನೋಜ್ ಭಟ್, ನಯನಾ ನಿಲಾವರ್, ಮಹಿಳಾ ಮೋರ್ಚಾದ ಸುಜಾತ ಬಾಂದೇಕರ್, ಕಲ್ಪನಾ ನಾಯ್ಕ್, ವೈಶಾಲಿ ತಾಂಡೆಲ್, ದೇವಿದಾಸ್ ನಾಯ್ಕ್, ಉಲ್ಲಾಸ್ ಕೆಣಿ ಸೇರಿದಂತೆ ವಿವಿಧ ಮಂಡಲಗಳ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು, ವಿಜಯದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಿದರು.