ಸಿಎಂ, ಸಚಿವರ ಭಾವಚಿತ್ರಕ್ಕೆ ಸೆಗಣಿ ಎರಚಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

| Published : Feb 06 2024, 01:33 AM IST

ಸಿಎಂ, ಸಚಿವರ ಭಾವಚಿತ್ರಕ್ಕೆ ಸೆಗಣಿ ಎರಚಿ ಬಿಜೆಪಿ ಕಾರ್ಯಕರ್ತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರ ಭಾವಚಿತ್ರವನ್ನು ಉದ್ದೇಶ ಪೂರ್ವಕವಾಗಿ ತೆಗೆದು ಹಾಕಿ ಅವಮಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಪಶು ಆಸ್ಪತ್ರೆಯ ಸಂಚಾರಿ ತುರ್ತು ಚಿಕಿತ್ಸೆಯ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕದೇ ಇರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಭಾವಚಿತ್ರಕ್ಕೆ ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಸೆಗಣಿ ಎರಚಿ ಪಶು ಆಸ್ಪತ್ರೆ ಬಳಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರಿ ತುರ್ತು ವಾಹನದಲ್ಲಿ ಮೋದಿಯವರ ಭಾವಚಿತ್ರ ತೆಗೆದು ಹಾಕಿ ಮುಖ್ಯಮಂತ್ರಿ ಹಾಗೂ ಪಶು ಸಂಗೋಪನಾ ಸಚಿವರ ಫೋಟೋ ಹಾಕಲಾಗಿತ್ತು, ಇದನ್ನರಿತ ರೈತ ಮುಖಂಡ ಬಸವರಾಜ ಸಂಕಣ್ಣನವರ ಆಕ್ರೋಶಗೊಂಡು ಮೋದಿಯವರ ಫೋಟೋವನ್ನು ತೆಗೆದಂತೆ ಸಿದ್ದರಾಮಯ್ಯ ಅವರ ಫೋಟೋವನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.

ಸ್ಥಳಕ್ಕಾಗಮಿಸಿದ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಅವರಿಗೆ ಬೆಂಬಲ ನೀಡಿ ಪ್ರಧಾನಿ ಮೋದಿಯವರ ಭಾವಚಿತ್ರ ಇಲ್ಲದಿರುವುದನ್ನು ಖಂಡಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭ ಸ್ಥಳದಲ್ಲೇ ಇದ್ದ ಸೆಗಣಿಯನ್ನು ಪಶು ಸಂಚಾರಿ ವಾಹನದ ಮೇಲೆ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಶು ಸಂಗೋಪನಾ ಸಚಿವರಭಾವ ಚಿತ್ರಕ್ಕೆ ಎರಚಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಬಸವರಾಜ ಸಂಕಣ್ಣನವರ, ಪಶು ಸಂಗೋಪನೆ ಇಲಾಖೆಯ ವಾಹನಕ್ಕೆ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ ಪ್ರಸ್ತುತ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರ ಭಾವಚಿತ್ರವನ್ನು ಉದ್ದೇಶ ಪೂರ್ವಕವಾಗಿ ತೆಗೆದು ಹಾಕಿ ಅವಮಾನ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವ ಚಿತ್ರವನ್ನು ತೆಗುದು ಹಾಕಿ ಅವಮಾನಿಸಲಾಗಿತ್ತು. ಮತ್ತೊಮ್ಮೆ ಇಂತಹ ಹೀನ ಕೃತ್ಯಕ್ಕೆ ಸರ್ಕಾರ ಹಾಗೂ ಅಧಿಕಾರಿಗಳು ಹೊಣೆಗಾರಿಕೆ ಹೊರಬೇಕು. ಕೂಡಲೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಂಭಣ್ಣ ಬೀದರಿ, ಶಿವಣ್ಣ ಬೆನಕನಕೊಂಡ, ಹರೀಶ ಕಲಕಟ್ಟಿ, ನಾಗಪ್ಪ ಮೊಟೇಬೆನ್ನೂರ, ಮುರಿಗೆಪ್ಪ ಶೆಟ್ಟರ ಸೇರಿದಂತೆ ಇತರರಿದ್ದರು.