ಸಾರಾಂಶ
ರಟ್ಟೀಹಳ್ಳಿ: ಹಿಂದೂಗಳ ಪವಿತ್ರ ಶ್ರದ್ಧಾಕೇಂದ್ರ ಧರ್ಮಸ್ಥಳದ ಪಾವಿತ್ರ್ಯವನ್ನು 3- 4 ಬುರುಡೆ ಗ್ಯಾಂಗ್‍ಗಳಿಂದ ಹಾಳು ಮಾಡಲು ಸಾಧ್ಯವಿಲ್ಲ. ಎಸ್‌ಐಟಿ ತನಿಖೆಯೇ ಅವರಿಗೆ ತಿರುಗುಬಾಣವಾಗಿ ಒಬ್ಬೊಬ್ಬರೇ ಜೈಲುಪಾಲಾಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ತಿಳಿಸಿದರು.ತಾಲೂಕು ಬಿಜೆಪಿ ಕಾರ್ಯಕರ್ತರಿಂದ ಧರ್ಮಸ್ಥಳ ಉಳಿವಿಗಾಗಿ ಧರ್ಮಯುದ್ಧದ ಪ್ರತಿಭಟನೆಯಲ್ಲಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿದೆ. ಡಾ. ವೀರೇಂದ್ರ ಹೆಗ್ಗಡೆಯವರ ಆತ್ಮಸ್ಥೈರ್ಯ ಹೆಚ್ಚಿಸಲು ಹಿಂದೂ ಸಮಾಜ ರಾಜ್ಯಾದ್ಯಂತ ಧರ್ಮಸ್ಥಳ ಚಲೋ ಕಾರ್ಯಕ್ರಮದ ಮೂಲಕ ಹೋರಾಟ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳದ ವಿರುದ್ಧ ಎಡಪಂಥಿಯರ ಹೋರಾಟ ಪ್ರಾರಂಭವಾದ ಸಂದರ್ಭದಲ್ಲಿ ಜೈನ ಸಮುದಾಯದ ಗುಣಧರನಂದಿ ಶ್ರೀಗಳು ಪತ್ರಿಕಾ ಪ್ರಕಟಣೆ ಮೂಲಕ ನೇರವಾಗಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿ ಧರ್ಮ ವಿರೋಧಿ ಹಾಗೂ ಧರ್ಮಸ್ಥಳದ ವಿರೋಧಿ ನಿಲುವು ಕೈಗೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ಸಿನ ಅವಶೇಷಗಳು ಇಲ್ಲದಂತೆ ಮಾಡಲಾಗುವುದೆಂದು ತಿಳಿಸಿದ್ದರು ಎಂದರು.ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಭಾರತವು ಸನಾತನ ತಳಹದಿ ಮೇಲೆ ನಿಂತಿರುವುದು ಕೆಲ ಎಡಪಂಥಿಯರಿಗೆ ಸಹಿಸಲಾಗುತ್ತಿಲ್ಲ. ನಿರಂತರವಾಗಿ ಹಿಂದೂ ಸಮಾಜ ಹಾಗೂ ಹಿಂದೂ ದೇವಾಲಯಗಳ ಮೇಲೆ ಇಲ್ಲಸಲ್ಲದ ಅಪಪ್ರಚಾರಕ್ಕೆ ಮುಂದಾಗಿರುವುದು ದುರದೃಷ್ಟಕರ. ಪವಿತ್ರ ಧಾರ್ಮಿಕ ಕ್ಷೇತ್ರಗಳು ಉಳಿಬೇಕಾದರೆ ಜಾತಿಭೇದ ಬಿಟ್ಟು ಒಗ್ಗಟ್ಟಾಗಬೇಕು ಎಂದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಹಳೇ ಬಸ್ ನಿಲ್ದಾಣದ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾಲಕ್ಷ್ಮೀ ಸರ್ಕಲ್ ಮುಖಾಂತರ ಭಗತ್‍ಸಿಂಗ್ ಸರ್ಕಲ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ ಧರ್ಮಜಾಗೃತಿ ಮೂಡಿಸಲಾಯಿತು. ನಂತರ ಉಪತಹಸೀಲ್ದಾರ್ ಜಗತಾಪ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಎನ್.ಎಂ. ಈಟೇರ, ಆರ್.ಎನ್. ಗಂಗೋಳ, ಶಂಬಣ್ಣ ಗೂಳಪ್ಪನವರ, ಗಣೇಶ ವೇರ್ಣೇಕರ್, ಮಾಲತೇಶ ಬೆಳಕೆರಿ, ಸುಶೀಲ್ ನಾಡಿಗೇರ, ಮಾಲತೇಶಗೌಡ ಗಂಗೋಳ, ಹನುಮಂತಪ್ಪ ಗಾಜೇರ, ವೀರನಗೌಡ ಮಕರಿ, ರವಿ ಹದಡೇರ, ಬಸವರಾಜ ಕಟ್ಟಿಮನಿ, ಕಿಟ್ಟಪ್ಪ ಬಾಜಿರಾಯರ, ಶ್ರೀದೇವಿ ಬೈರೋಜಿಯವರ, ಸರೋಜಾ ಹುರಕಡ್ಲಿ, ಪ್ರಶಾಂತ ದ್ಯಾವಕ್ಕಳವರ, ಸುರೇಶ ಬೆಣ್ಣಿ, ರವೀಂದ್ರ ಮುದ್ದಣ್ಣನವರ, ಸುರೇಶ ದ್ಯಾವಕ್ಕಳವರ, ಎನ್.ಸಿ. ಕಠಾರೆ, ಹರೀಶ ಕಲಾಲ ಹಾಗೂ ಮುಂತಾದವರು ಇದ್ದರು.