ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರುಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತು ಬಿಜೆಪಿ ಕಾರ್ಯಕರ್ತರು ಗೆಜ್ಜಲಗೆರೆಯಿಂದ ಮಲೈ ಮಹದೇಶ್ವರ ಬೆಟ್ಟದವರೆಗೆ ಬೃಹತ್ ಬೈಕ್ ರ್‍ಯಾಲಿ ನಡೆಸಿದರು.
ಗ್ರಾಮದ ಶ್ರೀರಾಮ ದೇವಾಲಯದಲ್ಲಿ ಪಕ್ಷದ ಹಿರಿಯ ಮುಖಂಡ ಯೋಗೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಕಾರ್ಯಕರ್ತರ ಬೈಕ್ ರ್‍ಯಾಲಿಗೆ ಮನ್ಮುಲ್ ನಿರ್ದೇಶಕ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ.ಸ್ವಾಮಿ, ಕಳೆದ 2014ರಿಂದ 2024 ರವರೆಗೆ ದೇಶದ ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸಹ ಬಿಜೆಪಿ ಮತ್ತೊಮ್ಮೆ ಬಹುಮತದಿಂದ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗಲು ಬಿಜೆಪಿ ಕಾರ್ಯಕರ್ತರು ಹರಕೆ ಹೊತ್ತು ಮಲೈ ಮಹದೇಶ್ವರ ಬೆಟ್ಟದವರೆಗೆ ಬೈಕ್ ರ್‍ಯಾಲಿ ಹಮ್ಮಿಕೊಂಡಿದ್ದಾರೆ ಎಂದರು.ಜೆಡಿಎಸ್ ಮೈತ್ರಿಯೊಂದಿಗೆ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರೇ ಅಭ್ಯರ್ಥಿಗಳಾಗಿ ಕಣಕ್ಕಿಳಿದರೂ ಸಹ ನಮ್ಮ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಭೂತ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸಿ ಸಭೆ ನಡೆಸುವ ಮೂಲಕ ಮೈತ್ರಿ ಅಭ್ಯರ್ಥಿ ಬೆಂಬಲಿಸುವಂತೆ ಸೂಚನೆ ನೀಡಲಾಗುವುದು ಎಂದರು.ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡೋ ಮೂಲಕ ವಿನಾಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುವ ಮೂಲಕ ಮಂಡ್ಯ ಜಿಲ್ಲೆಯ ರೈತರ ಬದುಕನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ನಕಲಿ ಗ್ಯಾರಂಟಿ ಯೋಜನೆಗಳನ್ನು ಕಂಡಿರುವ ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಲೇವಡಿ ಮಾಡಿದರು.
ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಜಿ.ಸಿ.ಮಹೇಂದ್ರ, ಮೋಹನ, ಡಾಬಾ ಕಿಟ್ಟಿ, ನಿಂಗರಾಜು, ಉಪ್ಪಿನಕೆರೆ ನಾಗೇಶ, ಮಮತಾ ರಾಂಕಾ, ಎಂ.ಎಸ್ .ಜಗನ್ನಾಥ್ ಮತ್ತಿತರರು ಇದ್ದರು.ಬಿಜೆಪಿ ಬೈಕ್ ರ್‍ಯಾಲಿಗೆ ಡಿ.ಸಿ.ತಮ್ಮಣ್ಣ ಶುಭ ಕೋರಿಕೆಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿರುವ ಬೈಕ್ ರ್‍ಯಾಲಿಗೆ ಜೆಡಿಎಸ್‌ನ ಮಾಜಿ ಸಚಿವ ಶಾಸಕ ಡಿ.ಸಿ.ತಮ್ಮಣ್ಣ ಭಾನುವಾರ ಶುಭ ಹಾರೈಸಿ ಬೀಳ್ಕೊಟ್ಟರು.
ಗೆಜ್ಜಲಗೆರೆಯಿಂದ ಮಲೈ ಮಾದೇಶ್ವರ ಬೆಟ್ಟದವರೆಗೆ ಹಮ್ಮಿಕೊಂಡಿರುವ ರ್‍ಯಾಲಿಗೆ ಗ್ರಾಮದಿಂದ ಮೈಸೂರು- ಬೆಂಗಳೂರು ಹೆದ್ದಾರಿ ಮೂಲಕ ಪಟ್ಟಣದ ಪ್ರವಾಸಿ ಮಂದಿರ ನಾಲ್ವಡಿ ಕೃಷ್ಣರಾಜ ಒಡೆಯರು ವೃತ್ತಕ್ಕೆ ಆಗಮಿಸಿದ ರ್‍ಯಾಲಿ ಬರ ಮಾಡಿಕೊಂಡ ಮಾಜಿ ಸಚಿವ ತಮ್ಮಣ್ಣ ಮಾಲಾರ್ಪಣೆ ಶುಭ ಹಾರೈಸಿದರು.ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಮ್ಮಣ್ಣ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಚುನಾವಣೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡಬೇಕು ಎಂದು ಮನವಿ ಮಾಡಿದರು.ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ಮೋಹನ್ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇದ್ದರು.