ಬಳ್ಳಾರಿ: ದೆಹಲಿಯಲ್ಲಿ ನಡೆದಿದ್ದ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟನೆ
ನಡೆಸಿದ ಕ್ರಮವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ದೇಶಕ್ಕೆ ಕಳಂಕ ಉಂಟುಮಾಡುವ ಚಾಳಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಲಹೆಯಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಶೃಂಗಸಭೆ ವೇಳೆ ನಾಚಿಕೆ ಬಿಟ್ಟು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಕ್ಸ್‌ಪೋ ಶೃಂಗಸಭೆಯಲ್ಲಿ ಏಕಾಏಕಿ ಪ್ರವೇಶ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು, ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿರುವ ಟಿ-ಶರ್ಟ್ ಗಳನ್ನು ಪ್ರದರ್ಶಿಸಿ, ಭಾರತ-ಅಮೆರಿಕ ಒಪ್ಪಂದದ ನೆಪದಲ್ಲಿ ಪ್ರಧಾನಮಂತ್ರಿ ದೇಶದ ಹಿತ ಕಾಯುವ ಬದಲು ಟ್ರಂಪ್ ಜೊತೆ ರಾಜಿ ಮಾಡಿಕೊಂಡಿದ್ದಾರೆ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುವ ಹುನ್ನಾರದಿಂದ ಕಾಂಗ್ರೆಸ್ಸಿಗರು ಈ ಕೃತ್ಯ ಎಸಗಿದ್ದು, ದೇಶವನ್ನು ಅವಮಾನಕ್ಕೀಡು ಮಾಡಿದ್ದಾರೆ. ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವರ್ತನೆ ವಿರುದ್ಧ ವಾಗ್ದಾಳಿ ನಡೆಸಿದ ಪಕ್ಷದ ನಗರ ಘಟಕ ಅಧ್ಯಕ್ಷ ಗುರ್ರಂ ವೆಂಕಟರಮಣ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡವಿಸ್ವಾಮಿ, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ವಹಿಸಬೇಕು. ದೇಶದ ಮಾನ ಹರಾಜು ಮಾಡಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಕಾಂಗ್ರೆಸ್‌ನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಯುವ ಮೋರ್ಚಾ ಪ್ರಮುಖರಾದ ನವೀನ್, ಗಿರೀಶ್, ಕೇಶವ್, ಬಾಲಚಂದ್ರ, ಅಮರ್, ಅಕ್ಷಯ್ ಸೇರಿದಂತೆ ಪಕ್ಷದ ನಗರ ಘಟಕ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.