ಸಾರಾಂಶ
ಹೊಸಪೇಟೆ: ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತ ದೇಶದ ವಿರುದ್ಧವೇ ಹೋರಾಟ ಮಾಡುವೆವು ಎಂದು ನೀಡಿರುವ ದೇಶ ವಿರೋಧಿ ಹೇಳಿಕೆಯನ್ನು ಖಂಡಿಸಿ ಹಾಗೂ ದೇಶದ ಜನತೆ ಮುಂದೆ ಮಂಡಿಯೂರಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಶುಕ್ರವಾರ ವಿಜಯನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಪ್ರತಿಭಟಿಸಿದರು.ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಎಲ್ಲವನ್ನು ಅನುಭವಿಸಿರುವ ರಾಹುಲ್ ಗಾಂಧಿಯವರು ಅಪ್ರಬುದ್ಧ ಹೇಳಿಕೆಯಿಂದ ಭಾರತಕ್ಕೆ ಅಪಮಾನವಾಗಿದೆ. ಸಣ್ಣತನದ ರಾಜಕಾರಣ ಮಾಡುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೊಸದೇನಲ್ಲ. ಈ ಹಿಂದೆ ಹೊರ ದೇಶದಲ್ಲೂಇಂತಹದ್ಧೆ ದೇಶ ವಿರೋಧಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಅಂತಹದ್ದೆ ದೇಶ ವಿರೋಧಿ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಲೋಕಸಭಾ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಅಶೋಕ್ ಜೀರೆ, ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಲಾಪುರ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಮಧುರಚನ್ನಶಾಸ್ತ್ರಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೂರಿ ಬಂಗಾರು, ಜಿಲ್ಲಾ ಕಾರ್ಯದರ್ಶಿ ವ್ಯಾಸರಾಜ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಬಿ.ಜೆ. ಕವಿತಾ, ಬಸವರಾಜ್ ಗೌಳಿ, ರೇಣುಕಾ, ಮಹಾದೇವಿ, ತಿರುಮಲೇಶ್, ಯಲ್ಲಪ್ಪ, ಚೌಡಪ್ಪ, ಶ್ರೀನಿವಾಸ್, ಮಣಿಕಂಠ, ಕಳಕನಗೌಡ ಪಾಟೀಲ ಇತರರಿದ್ದರು.ಹೊಸಪೇಟೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳು ರಾಹುಲ್ ಗಾಂಧಿ ಅವರ ದೇಶ ವಿರೋಧಿ ಹೇಳಿಕೆಯನ್ನು ಖಂಡಿಸಿ ಶುಕ್ರವಾರ ಪುನೀತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.