ಸಾರಾಂಶ
ದೇಶ ವಿಕಾಸದತ್ತ ಸಾಗುತ್ತಿದೆ. ಬರುವ 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ವಿಶ್ವದ ಮೂರನೇ ಬಹುದೊಡ್ಡ ಆರ್ಥಿಕ ಶಕ್ತಿಯನ್ನಾಗಿಸಲು ಬಿಜೆಪಿ ಸಂಕಲ್ಪ ಮಾಡಿದೆ. ಆದರೆ ಬೇಲ್ ಮೇಲಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಮುಖಂಡರು ಶತಾಯಗತಾಯ ಅಧಿಕಾರಕ್ಕೆ ಬರುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವ್ಯಂಗ್ಯವಾಡಿದರು.
ಬ್ಯಾಡಗಿ: ದೇಶ ವಿಕಾಸದತ್ತ ಸಾಗುತ್ತಿದೆ. ಬರುವ 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ವಿಶ್ವದ ಮೂರನೇ ಬಹುದೊಡ್ಡ ಆರ್ಥಿಕ ಶಕ್ತಿಯನ್ನಾಗಿಸಲು ಬಿಜೆಪಿ ಸಂಕಲ್ಪ ಮಾಡಿದೆ. ಆದರೆ ಬೇಲ್ ಮೇಲಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಮುಖಂಡರು ಶತಾಯಗತಾಯ ಅಧಿಕಾರಕ್ಕೆ ಬರುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವ್ಯಂಗ್ಯವಾಡಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪಟ್ಟಣದಲ್ಲಿ ನಡೆದ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಮತಿ ಸೋನಿಯಾ ಗಾಂಧಿ ಸೇರಿದಂತೆ ರಾಹುಲ್ ಗಾಂಧಿ, ಪಿ. ಚಿದಂಬರಂ, ಅರವಿಂದ ಕ್ರೇಜಿವಾಲ್, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆದಿಯಾಗಿ ಬಹುತೇಕ ಮುಖಂಡರು ಜೈಲ್ ಮತ್ತು ಬೇಲ್ ಮೇಲಿದ್ದು ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಮುಖಂಡರ ಕೈಗೆ ದೇಶವನ್ನು ನೀಡಬೇಕೆ? ಇನ್ನೆಂದಿಗೂ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು. ಬೊಮ್ಮಾಯಿ ದೆಹಲಿಗೆ ಕಳುಹಿಸಿ: ಒಂದೇ ಕುಟುಂಬದ ಅಧೀನದಲ್ಲಿರುವ ಕಾಂಗ್ರೆಸ್‌ನದ್ದು ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವೇ ಒಂದಂಶದ ಕಾರ‍್ಯಕ್ರಮವಾಗಿದೆ, ದೇಶದ ಅಭಿವೃದ್ಧಿ ಹಾಗೂ ವಿಕಾಸ ಇದ್ಯಾವುದು ಕಾಂಗ್ರೆಸ್‌ಗೆ ಸಂಬಂಧವಿಲ್ಲ, ಕಳೆದ 60 ವರ್ಷಗಳಲ್ಲಿ ಬಹುಕೋಟಿ ಹಗರಣಗಳನ್ನು ಮಾಡಿ ದೇಶವನ್ನು ಕೊಳ್ಳೆ ಹೊಡೆದು ಅಧೋಗತಿಗೆ ತಳ್ಳಿದ್ದು ಮಾತ್ರ ಕಾಂಗ್ರೆಸ್‌ನ ಈವರೆಗಿನ ಅತೀದೊಡ್ಡ ಸಾಧನೆ. ಬಸವರಾಜ ಬೊಮ್ಮಾಯಿ ಅವರಿಗೆ ಮಂತ್ರಿಗಳಾಗಿ, ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ ಅನುಭವವಿದೆ. ಬಡವರ, ದೀನ ದಲಿತರು ಸೇರಿದಂತೆ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಒಂದಿಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದು, ಅವುಗಳನ್ನು ಸಾಕಾರಗೊಳಿಸಲು ಮತಕ್ಷೇತ್ರದ ಜನರು ಬಿಜೆಪಿಗೆ ಮತ ನೀಡುವ ಮೂಲಕ ಬೊಮ್ಮಾಯಿ ಅವರನ್ನು ದೆಹಲಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.ವ್ಯರ್ಥ ಮಾಡಿಕೊಳ್ಳಬೇಡಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯಲ್ಲಿ ಏನಾದರೂ ಅಭಿವೃದ್ಧಿ ಕಾಣಬೇಕಾದಲ್ಲಿ ಬಿಜೆಪಿಯನ್ನು ಬೆಂಬಲಿಸಿ ಆದರೆ ಕಾಂಗ್ರೆಸ್ ಬೆಂಬಲಿಸಿ ನಿಮ್ಮ ಮತವನ್ನು ಹಾಳು ಮಾಡಿಕೊಳ್ಳಬೇಡಿ. ಅನ್ನ (ಅಕ್ಕಿ) ನರೇಂದ್ರ ಮೋದಿಯದ್ದು, ಆದರೇ ಭಾಗ್ಯ ಸಿದ್ದರಾಮಯ್ಯನದು, ಗ್ಯಾರಂಟಿ ಯೋಜನೆಯ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದು ದೇಶವನ್ನು ಬರಿದು ಮಾಡಲು ಹೊರಟಿದ್ದಾರೆ. ಕೋವಿಡ್ ಸಮಯದಲ್ಲಿ ಲಸಿಕೆ ಸಿದ್ಧಪಡಿಸಿ ದೇಶದ ಜನರಿಗೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕನೊಬ್ಬ ಲಸಿಕೆ ಪಡೆದರೇ ಮಕ್ಕಳಾಗಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದ, ಇಂತಹ ನಾಯಕರ ಹೊಂದಿರುವ ಪಕ್ಷವನ್ನು ದೇಶದ ಜನತೆ ಮತ್ತೆ ಮನೆಯಲ್ಲಿ ಕೂರಿಸಲಿದ್ದಾರೆ ಎಂದರು.ಮೋದಿ ವಿಶ್ವದ ಸಂಪತ್ತು: ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಮೋದಿ ಎಂದರೆ ಕೇವಲ ಭಾರತವಷ್ಟೆ ಅಲ್ಲ, ಬದಲಾಗಿ ಇಡೀ ಜಗತ್ತಿನ ಸಂಪತ್ತು. ಈ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಈ ಬಾರಿ 400 ಸೀಟ್‌ಗಳ ಗೆಲ್ಲಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ, ಮುಖಂಡರಾದ ಬಾಲಚಂದ್ರಗೌಡ ಪಾಟೀಲ, ಮುರಿಗೆಪ್ಪ ಶೆಟ್ಟರ್, ಈರಣ್ಣ ಬಣಕಾರ, ಸುಭಾಸ್ ಮಾಳಗಿ, ಚಂದ್ರಣ್ಣ ಶೆಟ್ಟರ್, ಬಸವರಾಜ ಹಂಜಿ, ವಿಷ್ಣುಕಾಂತ ಬೆನ್ನೂರ, ಶಿವಯೋಗಿ ಗಡಾದ, ಹಾಲೇಶ್ ಜಾಧವ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.ಕಾಗಿನೆಲೆಶ್ರೀಗಳ ಆಶೀರ್ವಾದ ಪಡೆದ ನಡ್ಡಾ: ಇದಕ್ಕೂ ಮುನ್ನ ಕಾಗಿನೆಲೆ ಗ್ರಾಮದ ಕನಕ ಗುರುಪೀಠಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕನಕಗುರುಪಪೀಠದ ನಿರಂಜನಾ ನಂದಪುರಿ ಶ್ರೀಗಳ ಆಶೀರ್ವಾದ ಪಡೆದರಲ್ಲದೇ ಕೆಲ ಸಮಯ ಚರ್ಚೆ ನಡೆಸಿದರು. ನಂತರ ಜೆ.ಪಿ. ನಡ್ಡಾ, ಬಸವರಾಜ ಬೊಮ್ಮಾಯಿ ಹಾಗೂ ಆರ್. ಅಶೋಕ್ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಬಳಿಕ ಪಟ್ಟಣದಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮನೆಗೆ ಭೇಟಿ ನೀಡಿದರು.