ಸಾರಾಂಶ
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್‌ಚಂದ್ ಗೆಹಲೊತ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೋಮವಾರ ಪಾದಯಾತ್ರೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ನಗರದ ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಮಾಡರ್ನ್ ರೆಡಿಯೋ ವೃತ್ತ, ಪುನೀತ್ ರಾಜ್‌ಕುಮಾರ ವೃತ್ತದ ಮೂಲಕ ಸಾಗಿ ಬಂದು ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪಾದಯಾತ್ರೆ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರು ಹಾಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಮೊಳಗಿಸಿದರು.ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ, ಬಿಜೆಪಿ ಬ್ರಿಟಿಷರ ರೀತಿ ಆಡಳಿತ ನಡೆಸಲು ಹೊರಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡದಿದ್ದರೂ ರಾಜ್ಯಪಾಲರನ್ನು ಬಳಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದ್ದಾರೆ. ಅವರ ಹುನ್ನಾರ ಎಂದಿಗೂ ಫಲಿಸುವುದಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಮುಡಾ ಅವರ ಧರ್ಮ ಪತ್ನಿ ಪಾರ್ವತಮ್ಮ ಹೆಸರಿನಲ್ಲಿದ್ದ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ತಪ್ಪನ್ನು ಸರಿಪಡಿಸಿಕೊಳ್ಳಲು 3 ಎಕರೆ 16 ಗುಂಟೆ ಜಮೀನು ಬದಲಿಗೆ 14 ನಿವೇಶನಗಳನ್ನು ನೀಡಿದೆ. ಇದರಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ. ಈ ಪ್ರಕ್ರಿಯೆ ನಡೆದಿರುವುದು ಬಿಜೆಪಿ ಆಡಳಿತದಲ್ಲಿದ್ದಾಗ, ಆದರೆ, ಇದನ್ನೇ ಹಗರಣ ಎಂದು ಹುನ್ನಾರ ನಡೆಸಿ, ಬಿಜೆಪಿ-ಜೆಡಿಎಸ್‌ನವರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಡಿಸಿದ್ದಾರೆ. ಇದು ಪಕ್ಕಾ ರಾಜಕೀಯ ದುರುದ್ದೇಶಪೂರಿತ ನಡೆಯಾಗಿದೆ. ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಲಿದೆ ಎಂದರು.ಸಂಸದ ಈ. ತುಕಾರಾಂ ಮಾತನಾಡಿ, ರಾಜ್ಯದಲ್ಲಿ ದೇವರಾಜ್ ಅರಸು ಮಾದರಿಯಲ್ಲಿ ಸಿದ್ದರಾಮಯ್ಯ ಅವರು ಆಡಳಿತ ನೀಡಿದ್ದಾರೆ. ಬಿಜೆಪಿ ಸರ್ಕಾರ ಕಾರ್ಪೊರೇಟ್ ಪರವಾಗಿ ಕೆಲಸ ಮಾಡುತ್ತದೆ. ಆದರೆ, ಕಾಂಗ್ರೆಸ್ ಜನಪರ ಆಡಳಿತ ನೀಡುತ್ತದೆ ಎಂಬುದಕ್ಕೆ ಪಂಚ ಗ್ಯಾರಂಟಿಗಳೇ ಸಾಕ್ಷಿ. ಈ ಗ್ಯಾರಂಟಿಗಳನ್ನು ಬಂದ್ ಮಾಡಲು ಸುಖಾಸುಮ್ಮನೇ ಕೇಂದ್ರ ಸರ್ಕಾರ ಕಾಟ ಕೊಡುತ್ತಿದೆ. 136 ಶಾಸಕರನ್ನು ಹೊಂದಿದ ಸರ್ಕಾರವನ್ನು ಅಭದ್ರ ಮಾಡಲು ಹೊರಟಿದ್ದಾರೆ. ಇವರ ಆಸೆ ಎಂದಿಗೂ ಫಲಿಸುವುದಿಲ್ಲ. ರಾಜ್ಯಪಾಲರು ಸಂವಿಧಾನ ಉಳಿಸಬೇಕು. ಸಂವಿಧಾನವನ್ನು ಕಗ್ಗೊಲೆ ಮಾಡಬಾರದು. ಪ್ರಜಾಪ್ರಭುತ್ವ ಆಶಯದ ವಿರುದ್ಧ ನಡೆದುಕೊಳ್ಳಬಾರದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಕ್ ಮಾತನಾಡಿ, ಬಿಜೆಪಿಯವರು ಎಂದಿಗೂ ಜನಾದೇಶದಲ್ಲಿ ಸರ್ಕಾರ ರೂಪಿಸಿಲ್ಲ. ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ರವಾನಿಸಿದರು.
ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (ಹುಡಾ) ಮಹಮ್ಮದ್ ಇಮಾಮ್ ನಿಯಾಜಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಸಿ. ಖಾಜಾ ಹುಸೇನ್, ಅಟವಾಳಗಿ ಕೊಟ್ರೇಶ್, ಕ್ವಾಲ್ವಿ ಹನುಮಂತಪ್ಪ, ವಿ. ಅಂಜಿನಪ್ಪ, ಕುಬೇರಪ್ಪ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಯಾದವ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನಳಪ್ಪ, ಮುಖಂಡರಾದ ಕವಿತಾ ಈಶ್ವರ ಸಿಂಗ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಡಿ. ವೆಂಕಟರಮಣ, ಜಿಲ್ಲಾ ಉಪಾಧ್ಯಕ್ಷ ಕೆ. ರಮೇಶ್, ಜಿ. ಶಿವಮೂರ್ತಿ, ಅರವಳ್ಳಿ ವೀರಣ್ಣ, ವಸಂತ ಕುಮಾರ್, ದೇವರಮನೆ ಕೆನ್ನೇಶ್ವರ, ಡಿ. ಚಾಂದ್ ಮತ್ತಿತರರಿದ್ದರು.