ನಾಳೆ ಗದಗನಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ

| Published : Apr 21 2025, 12:45 AM IST

ಸಾರಾಂಶ

ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಸುಲಿಗೆ ಮಾಡುತ್ತಿದ್ದು, ಸರ್ಕಾರದ ದುರಾಡಳಿತ ಹಾಗೂ ಬೆಲೆ ಏರಿಕೆ ಖಂಡಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏ. ೨೨ರಂದು ಬೆಳಗ್ಗೆ ೧೦ ಗಂಟೆಗೆ ಗದಗನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.

ಶಿರಹಟ್ಟಿ: ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಸುಲಿಗೆ ಮಾಡುತ್ತಿದ್ದು, ಸರ್ಕಾರದ ದುರಾಡಳಿತ ಹಾಗೂ ಬೆಲೆ ಏರಿಕೆ ಖಂಡಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏ. ೨೨ರಂದು ಬೆಳಗ್ಗೆ ೧೦ ಗಂಟೆಗೆ ಗದಗನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.ಭಾನುವಾರ ಪಕ್ಷದ ಕಾರ್ಯಾಲಯದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಇವರ ಸರ್ಕಾರದಿಂದ ಬಡವರು ಜೀವನ ನಡೆಸಲು ಸಾಧ್ಯವಿಲ್ಲದಂತಾಗಿದೆ. ಪೆಟ್ರೋಲ್, ಹಾಲು, ಸ್ಟಾಂಪ್ ಪೇಪರ್, ಮಧ್ಯ, ವಿದ್ಯುತ್, ಬಸ್ ದರ ಸೇರಿ ಎಲ್ಲದರ ಮೇಲೆ ಟ್ಯಾಕ್ಸ್ ಹಾಕಿ ತಮ್ಮ ಗ್ಯಾರಂಟಿಗಳಿಗೆ ಹಣ ನೀಡಲು ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರವನ್ನು ಶೇ. ೪೦ ಕಮಿಷನ್ ಸರ್ಕಾರ ಎಂದು ಹೇಳುತ್ತಿದ್ದ ಕಾಂಗ್ರೆಸ್‌ನವರು ಇಂದು ಶೇ. ೬೦ ಕಮಿಷನ್ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಜನವಿರೋಧಿ ನೀತಿ, ಅಲ್ಪಸಂಖ್ಯಾತರ ಓಲೈಕೆ, ದಲಿತ ಸಮುದಾಯದವರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ದುರ್ಬಳಕೆ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು ಎಂದರು.ರಾಜ್ಯದಲ್ಲಿ ಯಾಕಪ್ಪ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದು, ೨ ವರ್ಷದಲ್ಲಿ ೩ ಬಾರಿ ತೆರಿಗೆ ಹೆಚ್ಚಳ ಮಾಡಿದೆ. ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡುತ್ತಿದ್ದ ಕೃಷಿ ಸಲಕರಣೆ ಹಾಗೂ ಸಹಾಯಧನ ಬೀಜ, ಗೊಬ್ಬರ ನೀಡದೇ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ ಎಂದು ರೈತರೇ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದು ದೂರಿದರು.ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಯಾಪೈಸೆ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ನಗರೋತ್ಥಾನ ಯೋಜನೆ ಹೊರತು ಪಡಿಸಿದರೆ ಮತ್ಯಾವ ಅಭಿವೃದ್ಧಿಗೂ ಅನುದಾನವಿಲ್ಲ. ಇದನ್ನು ಕೇಳಿದರೆ ಈ ಸರ್ಕಾರದ ಪೌರಾಡಳಿತ ಸಚಿವರೆ ತೀವ್ರ ಬೇಸರದ ಮಾತುಗಳನ್ನು ಹೇಳುತ್ತಿದ್ದಾರೆ ಎಂದರು.ನಮ್ಮ ನಮ್ಮಲ್ಲಿಯೇ ಗುಂಪುಗಾರಿಕೆ, ಬಣ ರಾಜಕೀಯ ತರಬೇಡಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವ ಜತೆಗೆ ಮುಂಬರಲಿರುವ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಗಳನ್ನು ಗೆಲ್ಲಬೇಕು. ಎಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಮಟ್ಟದಿಂದಲೇ ಕಾಂಗ್ರೆಸ್ ಪಕ್ಷವನ್ನು ತೊಲಗಿಸಲು ಶ್ರಮಿಸಬೇಕು ಎಂದು ಕರೆ ಕೊಟ್ಟರು.ಜನಾಕ್ರೋಶ ಯಾತ್ರೆಗೆ ಕ್ಷೇತ್ರದಿಂದ ೩ ಸಾವಿರಕ್ಕೂ ಹೆಚ್ಚು ಜನ ಬರಲಿದ್ದಾರೆ. ಈ ಯಾತ್ರೆಯಲ್ಲಿ ಮಾಜಿ ಸಚಿವರಾದ ಸಿ.ಸಿ. ಪಾಟೀಲ. ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ, ಮಂಡಲದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಬಿ.ಡಿ. ಪಲ್ಲೇದ, ಅಶೋಕ ವರವಿ, ಸಂದೀಪ ಕಪ್ಪತ್ತನವರ, ಪ್ರವೀಣಗೌಡ ಪಾಟೀಲ, ಶಂಕರ ಮರಾಠೆ, ರಾಮಣ್ಣ ಕಂಬಳಿ, ಶ್ರೀನಿವಾಸ ಬಾರಬರ, ಬಸವರಾಜ ವಡವಿ, ಬಸವರಾಜ ತುಳಿ, ಮಲ್ಲು ಕಬಾಡಿ ಇತರರು ಇದ್ದರು.