ಏಪ್ರಿಲ್ 24ರಂದು ಹೊಸಪೇಟೆಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ

| Published : Apr 22 2025, 01:53 AM IST

ಸಾರಾಂಶ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏ. 24ರಂದು ಅಪರಾಹ್ನ 4 ಗಂಟೆಗೆ ಹೊಸಪೇಟೆಯಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ಹೇಳಿದರು.

ಹೊಸಪೇಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಏ. 24ರಂದು ಅಪರಾಹ್ನ 4 ಗಂಟೆಗೆ ಹೊಸಪೇಟೆಯಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪಾದಗಟ್ಟಿ ಆಂಜನೇಯ ದೇವಾಲಯದಿಂದ ಆರಂಭಗೊಳ್ಳುವ ಜನಾಕ್ರೋಶ ಯಾತ್ರೆ ಮೇನ್‌ ಬಜಾರ, ಮಹಾತ್ಮ ಗಾಂಧಿ ವೃತ್ತ, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್‌ ನಿಲ್ದಾಣ ಮಾರ್ಗವಾಗಿ ಪುನೀತ್‌ ರಾಜಕುಮಾರ ವೃತ್ತದಿಂದ ಅಂಬೇಡ್ಕರ್‌ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯ ವಿವಿಧ ತಾಲೂಕು ಹಾಗೂ ಹೋಬಳಿಗಳಿಂದ ಸಾವಿರಾರು ಜನರು ಆಗಮಿಸಲಿದ್ದಾರೆ. ಈಗಾಗಲೇ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಜನಾಕ್ರೋಶ ಇದೆ ಎಂದರು.

ರಾಜ್ಯದಲ್ಲಿ ಹಾಲಿನ ದರ, ತೈಲ ಬೆಲೆ, ಬಸ್‌ ಟಿಕೆಟ್‌ ದರ, ಆಸ್ತಿ ನೋಂದಣಿ, ಬಾಂಡ್‌ಗಳ ಖರೀದಿಪತ್ರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಖಂಡಿಸಿ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಸಲಾಗಿದೆ. ಹೊಸಪೇಟೆಯಲ್ಲೂ ಪ್ರತಿಭಟನೆ ನಡೆಯಲಿದ್ದು, ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಜನರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದರು.

ಈ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ. ಆದರೆ, ಈ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಲಾಗಿಲ್ಲ. ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ. ಆದರೆ, ಸುಮ್ಮನೆ ಜಾರಿ ಮಾಡಿ, ಕೈ ತೊಳೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೂ ಸರಿಯಾಗಿ ಅನುದಾನ ಒದಗಿಸಿಲ್ಲ. ವಿರೋಧ ಪಕ್ಷಗಳ ಶಾಸಕರಿಗೆ ಅನುದಾನ ಕೂಡ ನೀಡಲಾಗುತ್ತಿಲ್ಲ. ಸರ್ಕಾರ ಜನರ ಸಮಸ್ಯೆ ಅರ್ಥ ಮಾಡಿಕೊಂಡು ನಡೆಯಬೇಕು. ಬೆಲೆ ಏರಿಕೆ ಮಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗುತ್ತಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಮಾತನಾಡಿ, ಜನಾಕ್ರೋಶ ಯಾತ್ರೆ ಯಶಸ್ವಿಗೊಳಿಸಲಾಗುವುದು. ಸಕ್ಕರೆ ಕಾರ್ಖಾನೆ, ತುಂಗಭದ್ರಾ ಜಲಾಶಯಗಳ ಗೇಟ್‌ ನಿರ್ಮಾಣ ಕಾಮಗಾರಿ, ರೈಲ್ವೆ ಮೇಲ್ಸೇತುವೆ, ಬಡವರಿಗೆ ನಿವೇಶನ, ಮನೆಗಳ ಮಂಜೂರಾತಿ, ಕೆರೆ ತುಂಬಿಸುವ ಯೋಜನೆಗಳು ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಶೀಘ್ರವೇ ಜಿಲ್ಲಾ ಕೇಂದ್ರದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಮುಖಂಡರಾದ ಚನ್ನಬಸವನಗೌಡ ಪಾಟೀಲ, ಅಯ್ಯಾಳಿ ತಿಮ್ಮಪ್ಪ, ಅಶೋಕ ಜೀರೆ, ಬಲ್ಲಾಹುಣ್ಸಿ ರಾಮಣ್ಣ, ಕೆ.ಎಸ್‌. ರಾಘವೇಂದ್ರ, ಕಿಚಿಡಿ ಕೊಟ್ರೇಶ, ಶಂಕರ ಮೇಟಿ, ಅಶೋಕ ಜೀರೆ, ಕೆ.ಎಸ್. ರಾಘವೇಂದ್ರ, ವಾರದ ಗೌಸ್, ಅನುರಾಧಾ ಮತ್ತಿತರರಿದ್ದರು.