ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಎಚ್.ಕೆ. ಪಾಟೀಲರು ಹಲವು ದೂರದೃಷ್ಟಿಯ ಯೋಜನೆ ರೂಪಿಸಿದ್ದು, ಈಗಾಗಲೇ ಕೆಲ ಕಾಮಗಾರಿಗಳು ಕಾರ್ಯಾದೇಶದ ಹಂತದಲ್ಲಿವೆ. ಇದನ್ನರಿತ ಬಿಜೆಪಿ ದುರುದ್ದೇಶದಿಂದಲೇ ಕುಡಿಯುವ ನೀರಿನ ವಿಚಾರವನ್ನು ರಾಜಕೀಯಗೊಳಿಸುತ್ತಿದೆ.
ಕನ್ನಡಪ್ರಭ ವಾರ್ತೆ ಗದಗ
ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಎಚ್.ಕೆ. ಪಾಟೀಲರು ಹಲವು ದೂರದೃಷ್ಟಿಯ ಯೋಜನೆ ರೂಪಿಸಿದ್ದು, ಈಗಾಗಲೇ ಕೆಲ ಕಾಮಗಾರಿಗಳು ಕಾರ್ಯಾದೇಶದ ಹಂತದಲ್ಲಿವೆ. ಇದನ್ನರಿತ ಬಿಜೆಪಿ ದುರುದ್ದೇಶದಿಂದಲೇ ಕುಡಿಯುವ ನೀರಿನ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಚ್.ಕೆ. ಪಾಟೀಲ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ₹೫೯.೮೦ ಕೋಟಿ ಮೊತ್ತದ ಕಾಮಗಾರಿಗಳಿಗೆ ಸರ್ಕಾರದ ಅನುಮೋದನೆ ದೊರೆತಿದೆ. ಇದರಡಿ ಎಸ್.ಎಂ. ಕೃಷ್ಣಾನಗರ, ನರಸಾಪುರ, ಗಂಗಿಮಡಿ, ಜಿ.ಎನ್.ಟಿ.ಟಿ.ಎಫ್ ಹತ್ತಿರ ಹಾಗೂ ಎಪಿಎಂಸಿ ಪ್ರದೇಶಗಳಲ್ಲಿ ಐದು ಮೇಲ್ಮಟ್ಟದ ಜಲಸಂಗ್ರಹಾರಗಳ ನಿರ್ಮಾಣ ಸೇರಿದಂತೆ ಒಟ್ಟು ೧೮ ಮೇಲ್ಮಟ್ಟದ ಜಲಸಂಗ್ರಹಗಾರಗಳಿಗೆ ಏಕಕಾಲಕ್ಕೆ ನೀರು ತುಂಬಿಸುವ ಟೆಂಡರ್ ಪ್ರಕ್ರಿಯೆ ಕಳೆದ ಆಗಸ್ಟ್‌ನಲ್ಲಿಯೇ ಪೂರ್ಣಗೊಂಡಿದೆ ಎಂದರು.
ಹಮ್ಮಗಿ ಬ್ಯಾರೇಜ್‌ನಿಂದ ಗದಗಕ್ಕೆ ನೀರು ಪೂರೈಸುವ ವ್ಯವಸ್ಥೆಯಡಿ ಹಮ್ಮಗಿ ಹಾಗೂ ಡಂಬಳ ಪಂಪ್‌ಹೌಸ್, ಪಾಪನಾಶಿ ನೀರು ಶುದ್ಧೀಕರಣ ಘಟಕಗಳಲ್ಲಿ ಹೊಸ ಮೋಟಾರ್, ಪಂಪ್, ಪ್ಯಾನಲ್ ಬೋರ್ಡ್, ವಾಲ್ವ್ ಮತ್ತು ಟಿಸಿ ಅಳವಡಿಕೆ, ಅಪೂರ್ಣ ಜಲಸಂಗ್ರಹಾರಗಳ ಪೂರ್ಣಗೊಳಿಸುವಿಕೆ ಸೇರಿದಂತೆ ಒಟ್ಟು ಪಾಪನಾಶಿ ಡಬ್ಲ್ಯುಟಿಪಿಯಿಂದ ಗದಗ ‘ಎ’ ಪಾಯಿಂಟ್‌ವರೆಗೆ ಹೊಸ ಪೈಪ್‌ಲೈನ್‌ಗೆ ₹೨೬.೩೩ ಕೋಟಿ ಹಾಗೂ ನೀರು ಸಂಗ್ರಹಣಾ ಕೆರೆಗೆ ₹೨೦ ಕೋಟಿ ವೆಚ್ಚದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.ಅದೇ ರೀತಿ ಭೀಷ್ಮ ಕೆರೆಗೆ ಹಮ್ಮಗಿ ಬ್ಯಾರೇಜ್‌ನಿಂದ ನೀರು ಹರಿಸುವ ಮೂಲಕ ಅವಳಿ ನಗರದ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಿದ್ದು, ನೀರಿನ ತುರ್ತು ಸಮಸ್ಯೆ ಎದುರಾದಾಗ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸುಮಾರು ೮೪೬ ಕೊಳವೆಬಾವಿಗಳ ಮೂಲಕವೂ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬಿಜೆಪಿ ಆಡಳಿತದಲ್ಲಿದ್ದಾಗ ಗದಗ-ಬೆಟಗೇರಿ ಜನರಿಗೆ ಎಷ್ಟು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿತ್ತು ಮತ್ತು ಆಗ ಶಾಶ್ವತ ಪರಿಹಾರಕ್ಕಾಗಿ ಯಾವ ಕ್ರಮ ಕೈಗೊಳ್ಳಲಾಗಿತ್ತು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಚಿಮ್ಮಿ ನದಾಫ, ಇಮ್ತಿಯಾಜ ಶಿರಹಟ್ಟಿ, ಶಕುಂತಲಾ ಅಕ್ಕಿ, ಲಕ್ಷ್ಮೀ ಸಿದ್ದಮ್ಮನಹಳ್ಳಿ, ಲಲಿತಾ ಅಸೂಟಿ, ಪರವಿನಬಾನು ಮುಲ್ಲಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಬಸವರಾಜ ಕಡೇಮನಿ, ಅನೀಲ ಸಿದ್ದಮ್ಮನಹಳ್ಳಿ ಇದ್ದರು.