ಸಾರಾಂಶ
ಯೋಧರಿಗೆ ನಮಸ್ಕಾರ ಮಾಡಬೇಕೇ ಹೊರತು ಅವರು ನಮಸ್ಕಾರ ಮಾಡೋ ಪರಿಸ್ಥಿತಿ ನಿರ್ಮಾಣ ಆಗುವುದು ಸರಿಯಲ್ಲ.
ಭಟ್ಕಳ: ಬಿಜೆಪಿಗರು ಸೈನಿಕರ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದು, ಇದು ಸರಿಯಲ್ಲ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ನಮ್ಮ ಹೆಣ್ಣು ಮಕ್ಕಳ ಸಿಂದೂರ ಅಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನಾವೂ ಬೆಂಬಲಿಸಿದ್ದೆವು. ನಮ್ಮ ಮೂರೂ ಸೇನಾಪಡೆಯವರು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದ್ದರು. ಇದು ಹೆಮ್ಮೆಯ ವಿಚಾರ ಎಂದರು.ಆದರೆ ಮಧ್ಯಪ್ರದೇಶದ ಬಿಜೆಪಿ ಸಚಿವರೊಬ್ಬರು ಹೋರಾಟ ಮಾಡಿದ ಸೇನಾ ಪಡೆಯ ಪ್ರಮುಖರೊಬ್ಬರು ಉಗ್ರರ ಸಹೋದರಿ ಎಂದು ಮತ್ತು ಅಲ್ಲಿನ ಉಪಮುಖ್ಯಮಂತ್ರಿ ಪ್ರಧಾನಿ ಮೋದಿಯವರನ್ನು ಹೊಗಳುವ ಭರದಲ್ಲಿ ನಮ್ಮ ಯೋಧರೂ ಪ್ರಧಾನಿಯವರ ಕಾಲಿಗೆ ಬೀಳ್ತಾರೆ ಎಂದು ಹೇಳಿರುವುದು ಸರಿಯಲ್ಲ ಎಂದರು.
ಯೋಧರಿಗೆ ನಮಸ್ಕಾರ ಮಾಡಬೇಕೇ ಹೊರತು ಅವರು ನಮಸ್ಕಾರ ಮಾಡೋ ಪರಿಸ್ಥಿತಿ ನಿರ್ಮಾಣ ಆಗುವುದು ಸರಿಯಲ್ಲ. ಇದಕ್ಕೆ ನಾವು ಬಿಡುವುದೂ ಇಲ್ಲ ಎಂದರು.ನಮ್ಮ ಸರ್ಕಾರದ ಅವಧಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಗಮನ ಹರಿಸಿಲ್ಲ. ಅವರ ಆರೈಕೆಗಾಗಿಯೇ ಒಂದು ಆಸ್ಪತ್ರೆ ನಿರ್ಮಿಸುತ್ತಿದ್ದೇವೆ. ನನ್ನ ಅಧಿಕಾರದ ಅವಧಿಯಲ್ಲಿ ಎಂಡೋ ಸಲ್ಫಾನ ಪೀಡಿತರಿಗೆ ಹೆಚ್ಚಿನ ಸೌಲಭ್ಯ ಮತ್ತು ₹4 ಸಾವಿರ ಮಾಸಾಸನ ನೀಡಲಾಗುತ್ತಿದ್ದು, ಅಗತ್ಯ ಬಿದ್ದರೆ ಮತ್ತಷ್ಟು ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು.