ಗೃಹ ಸಚಿವರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಚಂದ್ರಣ್ಣ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ರಾಜ್ಯ ರೈತ ಸಂಘ ಮೂಲಸೌಕರ್ಯ ಹಾಗೂ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಹ ತಾಲೂಕು ಆಡಳಿತ , ಜಿಲ್ಲಾಡಳಿತ ಸಮಸ್ಯೆಗಳನ್ನು ಬಗೆರಿಸುವಲ್ಲಿ ವಿಫಲವಾಗಿದ್ದು, 26ರಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಗೃಹ ಸಚಿವರಿಗೆ ಕಪ್ಪುಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಚಂದ್ರಣ್ಣ ಎಚ್ಚರಿಸಿದರು.

ಪಟ್ಟಣದ ಪಟ್ಟಣ ಪಂಚಾಯತಿ ಮುಂದೆ ಕಳೆದ 48 ದಿನಗಳಿಂದ ನಡೆಯುತ್ತಿರುವ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರೈತ ಸಂಘ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ದೇಶಕ್ಕೆ ಅನ್ನ ಕೊಡುವ ರೈತನ ಸಮಸ್ಯೆಗಳನ್ನು ಬಗೆಹರಿಸದ ತಾಲೂಕು ಹಾಗೂ ಜಿಲ್ಲಾಡಳಿತ ತಾಲೂಕಿನಲ್ಲಿ ಸರ್ವ ದಾರ್ಶನಿಕರ ಜಯಂತಿಯನ್ನು ಹಮ್ಮಿಕೊಂಡಿದ್ದು ಸಮಾಜದಲ್ಲಿ ನಾವು ದೊಡ್ಡ ಮಟ್ಟದ ಜನಸೇವೆ ಮಾಡುತ್ತಿದ್ದೇವೆ ಎಂಬ ಮಾಯೆಗೆ ಜನಸಾಮಾನ್ಯರನ್ನು ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತವು ನಿಷ್ಕ್ರಿಯವಾಗಿದ್ದರೂ ರಾಜ್ಯ ಸರ್ಕಾರ ಹಾಗೂ ಸಚಿವರುಗಳು ಇಂಥ ಅಧಿಕಾರಿಗಳಿಗೆ ಬುದ್ಧಿ ಕಲಿಸುವ ಬದಲು ಕಂಡು ಕಾಣದಂತೆ ಅಧಿಕಾರದ ಕುರ್ಚಿಯನ್ನು ಉಳಿಸಿಕೊಳ್ಳುವ ಕಾಯಕದಲ್ಲಿ ತೊಡಗಿದ್ದು ಜನಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸುವ ಸೌಜನ್ಯತೆ ಇಲ್ಲದಾಗಿದೆ. ಸರ್ವ ದಾರ್ಶನಿಕ ಕಾರ್ಯಕ್ರಮಕ್ಕೆ ಆಗಮಿಸಿ ಸಮಾರಂಭದಲ್ಲಿ ಜನರತ್ತ ಕೈಬೀಸಿ ನಾವು ರೈತರ ಪರವಾಗಿದ್ದೇವೆ. ರೈತರೇ ನಮ್ಮ ಜೀವನಾಡಿ ಎಂದು ಬರೀ ಭಾಷಣ ನಡೆಸುವುದು ಇವರ ಕಾಯಕವಾಗಿದೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಗೃಹ ಸಚಿವರನ್ನು ರಾಜ್ಯ ರೈತ ಸಂಘ ಕಪ್ಪುಬಟ್ಟೆ ಪ್ರದರ್ಶನ ಹಾಗೂ ಧರಿಸಿ ಧರಣಿ ನಡೆಸುವ ಮೂಲಕ ಈ ಕಾರ್ಯಕ್ರಮಕ್ಕೆ ಬರದಂತೆ ವಿರೋಧ ವ್ಯಕ್ತಪಡಿಸುತ್ತೆವೆ.ಈ ಕೂಡಲೇ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.