ಗಂಗಾವತಿ: ಏ.1ರಿಂದ 4 ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ಸರ್ಕಾರ ನಿಯಮ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆ, ಅಖಿಲ ಭಾರತ ಫೆಡರೇಶನ್‌ಗಳ ಜಂಟಿ ವೇದಿಕೆ ಕರೆ ನೀಡಿದ್ದ ಹಿನ್ನೆಲೆ ಕಾರ್ಮಿಕರು ಕರಾಳ ದಿನಾಚರಣೆ ಆಚರಿಸಿದರು.
ಸಿಬಿಎಸ್ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರಿಗೂ ಜಾಥಾ ನಡೆಸಿದ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಏ. 1ರಿಂದ ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮ ಜಾರಿಗೆ ತರುವುದಾಗಿ ಘೋಷಿಸಿದೆ.ವ್ಯವಹಾರ ಸುಲಭಿಕರಿಸಲು ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರ ಈ ಕಾರ್ಮಿಕ ಸಂಹಿತೆ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಅವನ್ನು ರದ್ದುಪಡಿಸುವಂತೆ ಆಗ್ರಹಿಸಿದರು.2026ರ ಫೆ. 12ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ. ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನ ಕರೆದಿಲ್ಲ. ಇದು ಭಾರತವು ಬದ್ಧವಾಗಿರುವ ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ.
ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮತ್ತೆ ಬ್ರಿಟಿಷ್ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳಿಗೆ ತಳ್ಳಲಿವೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಕಾಲಗಳಲ್ಲಿ ಕಾರ್ಮಿಕ ವರ್ಗವು ಕೆಲಸದ ಸುರಕ್ಷತೆ, ಸಂಘಟನೆಯ ಹಕ್ಕು,ತ್ರಿಪಕ್ಷೀಯ ಮಾತುಕತೆ, ಮುಷ್ಕರ ಹಕ್ಕು, ಸಮರ್ಪಕ ವೇತನ, ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಬೋನಸ್, ಗ್ರಾಚ್ಯುಟಿ ಮತ್ತು ಪಿಂಚಣಿ ಹಕ್ಕುಗಳಿಗಾಗಿ ಹೋರಾಟ ನಡೆಸಿ ಈ ಹಕ್ಕು ಗಳಿಸಿದೆ. 1926ರ ಟ್ರೇಡ್ ಯೂನಿಯನ್ ಕಾಯ್ದೆಯ ಮೂಲಕ ಸಂಘಟನೆಯ ಹಕ್ಕು ಕಾನೂನೀಕರಿಸಲಾಯಿತು. ಬ್ರಿಟಿಷ್ ಕಾಲದಲ್ಲಿ ಐದು ಕಾನೂನುಗಳು ಮತ್ತು ಸ್ವಾತಂತ್ರ್ಯಾನಂತರ ಸಂಸತ್ತಿನ ಮೂಲಕ ಒಟ್ಟು 44 ಕೇಂದ್ರ ಕಾನೂನುಗಳು ಹಾಗೂ ರಾಜ್ಯ ಮಟ್ಟದಲ್ಲಿ ಸುಮಾರು 150 ಕಾನೂನು ರೂಪಗೊಂಡಿವೆ.ಇವೆಲ್ಲವೂ ಸುಮಾರು 150 ವರ್ಷಗಳ ಹೋರಾಟದ ಫಲ. ಆದರೆ, ಈ ಎಲ್ಲ ಸಾಧನೆ ಈಗಿನ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆ ರಚಿಸುವ ಮೂಲಕ ಹಿಂಪಡೆಯಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.ಈ ವೇಳೆ ನಿರುಪಾದಿ ಬೆಣಕಲ್,ಮಂಜುನಾಥ ಡಗ್ಗಿ, ದುರಗಮ್ಮ, ಕೃಷ್ಣಪ್ಪ,ಸಾವಿತ್ರಿ, ಮಹಿಬೂಬು, ಗ್ಯಾನೇಶ ಕಡಗದ, ಶಿವಕುಮಾರ, ಹುಸೇನಪ್ಪ, ಶ್ರೀನಿವಾಸ ಸೇರಿದಂತೆ ಇತರರು ಇದ್ದರು.