ಸಾರಾಂಶ
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಮುಂಬರುವ ಗಣರಾಜ್ಯೋತ್ಸವದಂದು ಕಪ್ಪು ಬಾವುಟ ಹಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಗಳ 17 ಗ್ರಾಮಗಳಿಗೆ ಕೊಳಚೆ ನೀರಿನ ಭಾಗ್ಯ ಕೊಟ್ಟು ಅದರ ಜೊತೆಗೆ ಗ್ರಾಮಸ್ಥರ ಆರೋಗ್ಯವನ್ನು ಹಾಳು ಮಾಡಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಮುಂಬರುವ ಗಣರಾಜ್ಯೋತ್ಸವದಂದು ಕಪ್ಪು ಬಾವುಟ ಹಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ತಿಳಿಸಿದೆ.ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ವಸಂತ್‌ಕುಮಾರ್, ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಈ ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ಶುದ್ಧ ನೀರು ಕೊಡುವ ಭರವಸೆ ಕೊಟ್ಟು, ಮಾತು ತಪ್ಪಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದರು.
ಕಾರ್ಖಾನೆಗಳ ತ್ಯಾಜ್ಯ ನೀರು ನೇರವಾಗಿ ನಮ್ಮ ಕೆರೆಗಳಿಗೆ ಬಿಡಲಾಗುತ್ತಿದೆ, ಇದರಿಂದ ಇವತ್ತು ನಮ್ಮ ಕೆರೆಯ ನೀರು ಕಲುಷಿತಗೊಂಡಿದೆ, ಅಂತರ್ಜಲ ನೀರು ವಿಷವಾಗಿದೆ, ಸುಮಾರು 28ಕ್ಕೂ ಹೆಚ್ಚು ಕಾರ್ಖಾನೆಗಳು ನೇರವಾಗಿ ಕಲುಷಿತ ನೀರು ಹೊರಗೆ ಬಿಡುತ್ತಿದ್ದಾರೆ, ಫೋಟೋ ಮತ್ತುವಿಡಿಯೋ ಸಮೇತ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.ಹೋರಾಟದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುತ್ತಾರೆ, ನಾಲ್ಕು ತಿಂಗಳಲ್ಲಿಎಸ್ ಟಿ ಪಿ ಘಟಕ ಕೆಲಸ ಶುರು ಮಾಡುವುದ್ದಾಗಿ ಹೇಳಿದರು, ಆರು ತಿಂಗಳು ಕಳೆದರೂ ಒಂದು ಪೈಸೆಯಷ್ಟು ಕೆಲಸವಾಗಿಲ್ಲ, ಕಾಡನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಿ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ ಆದರೆ ಇಲ್ಲಿವರೆಗೂ ಯಾವುದೇ ಕೆಲಸ ಶುರುವಾಗಿಲ್ಲ ಎಂದರು.ಅರ್ಕಾವತಿ ನದಿಯ ಉಳಿವಿಗಾಗಿ ಜೀವ ಸಂಕುಲದ ರಕ್ಷಣೆಗಾಗಿ ಇಂದು ಹೋರಾಟ ಮಾಡಲೇ ಬೇಕಾದ ಅನಿವಾರ್ಯವಾಗಿದೆ.ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರು ರಾಸಾಯನಿಕ ನೀರನ್ನು ನಿಲ್ಲಿಸಬೇಕು, ಮುಂದಿನ ಪೀಳಿಗೆಗೆ ಶುದ್ಧ ನೀರು ಕೊಡ ಬೇಕೆಂಬ ಕಾರಣಕ್ಕೆ ಜನವರಿ 26ರಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಪ್ಪು ಬಾವುಟವನ್ನು ಎರಡು ಪಂಚಾಯತಿಯ ಪ್ರತಿ ಮನೆಯ ಮೇಲೆ ಹಾರಿಸಲು ನಿರ್ಧರಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರು ಹಾಜರಿದ್ದರು.
ಫೋಟೋ-8ಕೆಡಿಬಿಪಿ4- ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಕೊಡುವ ಭರವಸೆ ಈಡೇರಿಸದ ಅಧಿಕಾರಿಗಳ ವಿರುದ್ದ ಸುದ್ದಿಗೋಷ್ಠಿ ನಡೆಯಿತು.