ಕರಿಮೆಣಸು ಜಿಎಸ್‌ಟಿಯಿಂದ ಮುಕ್ತ: ಆದೇಶ

| Published : Feb 21 2025, 12:46 AM IST

ಸಾರಾಂಶ

ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರ ಕರಿಮೆಣಸು ಮೇಲೆ ವಿಧಿಸಿದ್ದ ಜಿಎಸ್ ಟಿ ಅನ್ನು ತೆಗೆದು ಹಾಕುವಂತೆ ಕೊಡಗಿನ ಬೆಳೆಗಾರರ ಸಂಘಟನೆಗಳು ಹಲವು ಬಾರಿ ಒತ್ತಾಯಿಸುತ್ತಾ ಬಂದಿದ್ದರು. ಬೆಳೆಗಾರರ ಮನವಿಗೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಸ್ಪಂದಿಸಿದ್ದು, ಈ ಬಗ್ಗೆ ಕೇಂದ್ರದ ಗಮನ ಸೆಳೆದು ಬೆಳೆಗಾರರಿಗೆ ಸಂತಸ ನೀಡಿದ್ದಾರೆ.

ಕೇಂದ್ರ ಸರ್ಕಾರ ಕರಿಮೆಣಸು ಮೇಲೆ ಹಾಕಿದ್ದ ಜಿಎಸ್ ಟಿ ಅನ್ನು ತೆಗೆದು ಹಾಕಿದೆ. ಗೋಣಿಕೊಪ್ಪದ ಬೆಳೆಗಾರರೊಬ್ಬರಿಗೆ ಸುಮಾರು 1 ಕೋಟಿ ರು. ಜಿಎಸ್ ಟಿ ಕಟ್ಟುವಂತೆ ನೋಟೀಸ್ ಬಂದಿತ್ತು. ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನಿಯೋಗ ಸಂಸದ ಯದುವೀರ್ ಒಡೆಯರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಅದರಂತೆ ಸಂಸದ ಯದುವೀರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದಿದ್ದರು. ಅದರಂತೆ ಕರಿಮೆಣಸು ಬೆಳೆಗೆ ಕೇಂದ್ರ ಸರ್ಕಾರ ಜಿಎಸ್ ಟಿ ರದ್ದು ಮಾಡಿದೆ. ಇದರಿಂದ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ ಯದುವೀರ್ ಅವರಿಗೆ ಬೆಳೆಗಾರರು ಧನ್ಯವಾದ ಸಲ್ಲಿಸಿದ್ದಾರೆ.

ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಸ್ವಾಗತಾರ್ಹವಾಗಿದ್ದು, ಇದಕ್ಕೆ ಕಾರಣಕರ್ತರಾದ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುವುದಾಗಿ ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ತಿಳಿಸಿದ್ದಾರೆ.

ಪ್ಲಾಂಟೇಷನ್ ಬೆಳೆಗಳು ಮತ್ತು ಸಂಬಾರ ಪದಾರ್ಥಗಳನ್ನು ರೈತರು ಬೆಳೆದು ಮೂಲ ರೂಪದಲ್ಲಿ ಮಾರಾಟ ಮಾಡಿದರೆ ಅದು ಕಂದಾಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ನಿಯಮವಿದೆ. ಆದರೂ ಕೂಡ ಜಿಎಸ್‌ಟಿ ಪಟ್ಟಿಯಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲವೆಂಬ ಕಾರಣಕ್ಕೆ ಜಿಎಸ್‌ಟಿ ಕೌನ್ಸಿಲ್ ಕೆಲವು ಕರಿಮೆಣಸು ಬೆಳೆಗಾರರಿಗೆ ನೋಟೀಸ್ ನೀಡಿತ್ತು. ಇದರಿಂದ ಗೊಂದಲ ಏರ್ಪಟ್ಟು ಬೆಳೆಗಾರರ ವಿವಿಧ ಸಂಘಟನೆಗಳು ಸಂಸದ ಯದುವೀರ್ ಅವರ ಗಮನ ಸೆಳೆದಿದ್ದವು.

ಬೆಳೆಗಾರರ ಮನವಿಗೆ ತಕ್ಷಣ ಸ್ಪಂದಿಸಿದ ಸಂಸದರು ಕೇಂದ್ರ ಹಣಕಾಸು ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕರಿಮೆಣಸು ಬೆಳೆಗಾರರಿಗೆ ಜಿಎಸ್‌ಟಿ ಅನ್ವಯವಾಗದಂತೆ ನೋಡಿಕೊಂಡಿದ್ದಾರೆ. ಇದು ಸಂಸದರಿಗೆ ಇರುವ ಜನಪರ ಕಾಳಜಿ ಮತ್ತು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ದೊಡ್ಡ ಗುಣಕ್ಕೆ ಸಾಕ್ಷಿಯಾಗಿದೆ ಎಂದು ರಾಕೇಶ್ ದೇವಯ್ಯ ಶ್ಲಾಘಿಸಿದ್ದಾರೆ.