ಧಾರವಾಡ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬರದ ಛಾಯೆ ಆವರಿಸಿರುವುದು ಮನುಷ್ಯರ ಬದುಕಿನ ಮೇಲಷ್ಟೇ ಅಲ್ಲ, ವನ್ಯಜೀವಿಗಳ ಮೇಲೂ ಪರಿಣಾಮ ಬೀರಿದೆ. ಕಾಡಲ್ಲಿನ ಕೆರೆ-ಕಟ್ಟೆಗಳು ನೀರಿಲ್ಲದೆ ಬಾಯ್ತೆರೆದಿದ್ದು ನೀರು-ಆಹಾರಕ್ಕಾಗಿ ಪ್ರಾಣಿಗಳು ಪರದಾಡುತ್ತಿವೆ.

ಈರಪ್ಪ ನಾಯ್ಕರ್

ಹುಬ್ಬಳ್ಳಿ:

ಧಾರವಾಡ ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬರದ ಛಾಯೆ ಆವರಿಸಿರುವುದು ಮನುಷ್ಯರ ಬದುಕಿನ ಮೇಲಷ್ಟೇ ಅಲ್ಲ, ವನ್ಯಜೀವಿಗಳ ಮೇಲೂ ಪರಿಣಾಮ ಬೀರಿದೆ. ಕಾಡಲ್ಲಿನ ಕೆರೆ-ಕಟ್ಟೆಗಳು ನೀರಿಲ್ಲದೆ ಬಾಯ್ತೆರೆದಿದ್ದು ನೀರು-ಆಹಾರಕ್ಕಾಗಿ ಪ್ರಾಣಿಗಳು ಪರದಾಡುತ್ತಿವೆ.

ಬಯಲುಸೀಮೆಯ ಕಪ್ಪು ಮಣ್ಣಿನ ಹೊಲಗಳ ನಡುವೆ ಬನ್ನಿ, ಬೇವು ಹಾಗೂ ಜಾಲಿ ಗಿಡ-ಗಂಟಿಗಳೇ ಹಸಿರಿನ ಗುರುತುಗಳಾಗಿ ಉಳಿದಿವೆ. ಕೃಷಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದ್ದು, ಜಮೀನುಗಳಲ್ಲಿ ಬಿತ್ತನೆಯೂ ಆಗದೆ ಇರುವುದರಿಂದ ಕೃಷ್ಣಮೃಗಗಳಿಗೆ ಆಹಾರದ ಕೊರತೆ ಎದುರಾಗಿದೆ.

ಜಾಲಿಮುಳ್ಳೇ ಆಹಾರ:

ಕುಂದಗೋಳ, ಕುಸುಗಲ್ಲ, ಗುಡೇನಕಟ್ಟಿ, ಅಣ್ಣಿಗೇರಿ, ನವಲಗುಂದ ಹಾಗೂ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಭಾಗಗಳಲ್ಲಿ 15ರಿಂದ 20ರಷ್ಟು ಕೃಷ್ಣಮೃಗಗಳ ಹಿಂಡುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈ ಬಾರಿ ಅವುಗಳ ಸಂಖ್ಯೆ ಮತ್ತು ಸಂಚಾರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಒಣಗಿದ ಕೆರೆ-ಕಟ್ಟೆಗಳ ನಡುವೆ ಸಣ್ಣ ಹಳ್ಳಗಳ ತಗ್ಗು-ಗುಂಡಿಗಳಲ್ಲಿ ಉಳಿದಿರುವ ಅಲ್ಪ ನೀರನ್ನೇ ಕುಡಿದು, ಜಾಲಿಮುಳ್ಳಿನ ಸೊಪ್ಪು ಸೇವಿಸಿ ಬದುಕು ಸಾಗಿಸುತ್ತಿವೆ.

ಸದಾ ಓಡಾಡುತ್ತಿದ್ದ ಕೃಷ್ಣಮೃಗಗಳ ಹಿಂಡುಗಳು ವಾರದಿಂದ ಈ ಭಾಗದಲ್ಲಿ ಕಾಣಿಸುತ್ತಿಲ್ಲ. ಆದರೆ, ಅವುಗಳ ಹೆಜ್ಜೆ ಗುರುತುಗಳು ಮಾತ್ರ ಕಂಡುಬರುತ್ತಿವೆ ಎಂದು ಗುಡೇನಕಟ್ಟಿ ಗ್ರಾಮಸ್ಥರು "ಕನ್ನಡಪ್ರಭ "ಕ್ಕೆ ತಿಳಿಸಿದರು.

ಬೇಟೆಗಾರರಿಂದ ರಕ್ಷಿಸಿ:

ಹಿಂದೆ ಕೃಷ್ಣಮೃಗಗಳು ನೂರಾರು ಸಂಖ್ಯೆಯಲ್ಲಿ ಜಮೀನುಗಳಿಗೆ ನುಗ್ಗಿ ಬೆಳೆ ತುಳಿದು, ಕೊಂಬಿನಿಂದ ತಿವಿದು ಹಾನಿ ಮಾಡುತ್ತಿದ್ದವು. ಇದರಿಂದ ನಷ್ಟ ಅನುಭವಿಸಿದ ರೈತರು ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದೀಗ ಬರದ ತೀವ್ರತೆಯಿಂದ ಪರಿಸ್ಥಿತಿ ಬದಲಾಗಿದ್ದು, ಕೃಷ್ಣಮೃಗಗಳಿಗೆ ನೀರು-ಆಹಾರ ಒದಗಿಸಿ, ಬೇಟೆಗಾರರಿಂದ ರಕ್ಷಿಸುವಂತೆ ರೈತರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.

ಬಯಲುಸೀಮೆಯ ಸರಹದ್ದಿನಲ್ಲಿ ಸುಮಾರು ನಾಲ್ಕು ಎಕರೆಗೆ ಒಂದು ಕೃಷಿ ಹೊಂಡ ಇರುತ್ತದೆ. ಆದರೆ, ಬರದಿಂದ ಹನಿ ನೀರಿಲ್ಲದೆ ಭೂಮಿ ಬಾಯ್ಬಿಟ್ಟಿದೆ. ಹಿಂಡು ಹಿಂಡಾಗಿ ಬರುತ್ತಿದ್ದ ಜಿಂಕೆಗಳು ಈಗ ಬೆರಳೆಣಿಕೆಯಷ್ಟು ಮಾತ್ರ ಕಾಣುತ್ತಿವೆ. ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದವಾಗಿತ್ತು ಎಂದು ಗುಡೇನಕಟ್ಟಿ ರೈತ ಬಸವರಾಜ ಯೋಗಪ್ಪನವರ ಹೇಳಿದರು.

ಬರ ಮುಂದುವರಿದರೆ ನೀರು ಮತ್ತು ಆಹಾರ ಅರಸಿ ಕೃಷ್ಣಮೃಗಗಳು ನಾಡಿನತ್ತ ಬರುವ ಸಾಧ್ಯತೆ ಇರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.ಆಹಾರ, ನೀರಿನ ಕೊರತೆ:

ಕೃಷ್ಣಮೃಗಗಳು ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಕೃಷ್ಣಮೃಗ ಅಭಯಾರಣ್ಯವಿದೆ. ಆಹಾರ, ನೀರಿನ ಕೊರತೆಯಿಂದಾಗಿ ಇವುಗಳು ತಮ್ಮ ವ್ಯಾಪ್ತಿ ದಾಟಿ ಹಳ್ಳಿಗಳತ್ತ ಬರುತ್ತಿವೆ. ಧಾರವಾಡ-ಹಾವೇರಿ ಗಡಿಭಾಗದ ಕುಂದಗೋಳ, ನವಲಗುಂದ, ಅಣ್ಣಿಗೇರಿ ತಾಲೂಕಿನ ಕೆಲವು ಗ್ರಾಮಗಳ ಹೊಲಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ಕೃಷ್ಣಮೃಗಗಳು ದೂರದ ವರೆಗೂ ಸಂಚರಿಸುವ ಸ್ವಭಾವ ಹೊಂದಿವೆ. ಅವುಗಳ ಸಂಚಾರ ಪ್ರದೇಶ ಪರಿಶೀಲಿಸಿ, ಅಗತ್ಯವಿರುವೆಡೆ ನೀರಿನ ತೊಟ್ಟಿ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕೃಷ್ಣಮೃಗಗಳ ಸಂಖ್ಯೆಯನ್ನೂ ದಾಖಲಿಸಲಾಗುವುದು.

ರಾಮಲಿಂಗಪ್ಪ ಉಪ್ಪಾರ, ವಲಯ ಅರಣ್ಯಾಧಿಕಾರಿ