ಅಳಿದುಳಿದ ಬೆಳೆಗಳಿಗೆ ಕೃಷ್ಣಮೃಗಗಳ ಕಾಟ

| Published : Jul 13 2025, 01:18 AM IST

ಸಾರಾಂಶ

ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಹೆಸರು, ಹತ್ತಿ, ಅಲಸಂದಿ, ಸೋಯಾಬೀನ್ ಬಿತ್ತನೆ ಮಾಡಿದ್ದು, ಅವು ಚಿಗುರೊಡೆದು ಬೆಳೆಯುತ್ತಿದ್ದಂತೆ ಜಿಂಕೆಗಳ ಹಿಂಡು ದಾಂಗುಡಿಯಿಡುತ್ತಿವೆ

ಹಾವೇರಿ: ಜಿಲ್ಲೆಯಲ್ಲಿ ಈ ಸಲ ಅತಿವೃಷ್ಟಿಯಿಂದ ತೇವಾಂಶ ಅಧಿಕಗೊಂಡು ಬೆಳೆಗಳು ಹಳದಿ ರೋಗ, ಕೊಳೆ ರೋಗದಿಂದ ಹಾಳಾಗುತ್ತಿದೆ. ಹೀಗಾಗಿಯೂ ಅಳಿದುಳಿದ ಬೆಳೆದು ನಿಂತಿರುವ ಫಸಲುಗಳಿಗೆ ಕೃಷ್ಣ ಮೃಗಗಳ ಕಾಟ ಹೆಚ್ಚಾಗಿದ್ದು, ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.

ಪೂರ್ವ ಮುಂಗಾರಿನಲ್ಲಿ ಸುರಿದ ಮಳೆಗೆ ಬಿತ್ತನೆ ಮಾಡಿದ ಫಸಲುಗಳು ಇದೀಗ ಸಾಲು ಮಾಡುವ ಹಂತಕ್ಕೆ ಬಂದಿದ್ದು, ಜೂನ್ ಎರಡು ಹಾಗೂ ಮೂರನೇ ವಾರದಲ್ಲಿ ಬಿತ್ತಿದ್ದ ಫಸಲುಗಳು ಈಗಷ್ಟೇ ಮೊಳಕೆಯೊಡೆದು ಬೆಳೆದು ನಿಂತಿವೆ. ಈ ಮಧ್ಯೆ ಕೃಷ್ಣಮೃಗಗಳು ಹಿಂಡು ಹಿಂಡಾಗಿ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆಗಳ ಚಿಗುರುಗಳನ್ನು ತಿಂದು ಹಾಕುತ್ತಿರುವುದು ರೈತರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದ್ದು, ಬೆಳೆ ಉಳಿಸಿಕೊಳ್ಳುವುದೇ ಇಲ್ಲಿಯ ರೈತರಿಗೆ ಸವಾಲಾಗಿದೆ.

ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಹೆಸರು, ಹತ್ತಿ, ಅಲಸಂದಿ, ಸೋಯಾಬೀನ್ ಬಿತ್ತನೆ ಮಾಡಿದ್ದು, ಅವು ಚಿಗುರೊಡೆದು ಬೆಳೆಯುತ್ತಿದ್ದಂತೆ ಜಿಂಕೆಗಳ ಹಿಂಡು ದಾಂಗುಡಿಯಿಡುತ್ತಿವೆ. 15-20ಕ್ಕೂ ಹೆಚ್ಚು ಜಿಂಕೆಗಳಿರುವ ಒಂದೊಂದು ಹಿಂಡು ಹೊಲಕ್ಕೆ ನುಗ್ಗಿದರೆ ಗಂಟೆಯೊಳಗೆ ಎಕರೆಗಟ್ಟಲೆ ಹೊಲದಲ್ಲಿ ಬೆಳೆದ ಹಸಿರು ಪೂರ್ತಿ ಮಾಯವಾಗುತ್ತವೆ. ಚಿಗುರು ಎಲೆಗಳನ್ನು ಸಂಪೂರ್ಣವಾಗಿ ಜಿಂಕೆಗಳು ತಿಂದು ಹಾಕುತ್ತಿವೆ. ಕೆಲವು ಬಾರಿ ರಾತ್ರಿ ವೇಳೆ ಹಿಂಡು ನುಗ್ಗಿ ಬೆಳಗಾಗುವುದರೊಳಗೆ ಬೆಳೆ ಹಾಳು ಮಾಡುತ್ತಿವೆ. ಹೊಲದಲ್ಲೆಲ್ಲ ಓಡಿ, ಜಿಗಿದಾಡಿ ಸಸಿಗಳನ್ನು ಕಿತ್ತು ಹಾಕುತ್ತಿವೆ. ಎಕರೆಗೆ ಹತ್ತಾರು ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

ಮಳೆರಾಯನ ಕಣ್ಣಾಮುಚ್ಚಾಲೆಯಾಟದ ನಡುವೆಯೂ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದು ಒಂದು ಬಾರಿ ಬಿತ್ತನೆ ಮಾಡುವುದೇ ಕಷ್ಟ. ಅಂತಹದ್ದರಲ್ಲಿ ಜಿಂಕೆಗಳಿಗೆ ತುತ್ತಾದ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿ ಮತ್ತೆ ಮರು ಬಿತ್ತನೆ ಮಾಡುವುದು ಅಸಾಧ್ಯದ ಮಾತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜಿಂಕೆಗಳ ಹಾವಳಿ ನಿಯಂತ್ರಿಸಬೇಕು, ಇಲ್ಲವೇ ಜಿಂಕೆಗಳಿಗೆ ತುತ್ತಾಗುತ್ತಿರುವ ಬೆಳೆಗಳ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

8 ಸಾವಿರಕ್ಕೂ ಹೆಚ್ಚು ಕೃಷ್ಣಮೃಗಗಳು: ರಾಣಿಬೆನ್ನೂರು ಬಳಿ ಕೃಷ್ಣಮೃಗಗಳ ವನ್ಯಧಾಮವಿದ್ದು, ಅವುಗಳ ಸಂತತಿ ಈಗ 8 ಸಾವಿರಕ್ಕೂ ಮಿಕ್ಕಿದೆ. ಮಳೆ ಬಿದ್ದು ಹಸಿರು ಚಿಗುರಿರುವುದರಿಂದ ಅವು ಸುತ್ತಮುತ್ತಲಿನ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಜಿಂಕೆಗಳ ಉಪಟಳದಿಂದ ಹಾವೇರಿ,ರಾಣಿಬೆನ್ನೂರು, ಸವಣೂರು, ಹಿರೇಕೆರೂರು, ಬ್ಯಾಡಗಿ, ಗದಗ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲೂ ಜಿಂಕೆ ಹಾವಳಿ ಜೋರಾಗಿದೆ. ಅದರಲ್ಲೂ ಹಾವೇರಿ ಸುತ್ತಮುತ್ತಲಿನ ಗ್ರಾಮಗಳ ಹೊಲಗಳಿಗೆ ಜಿಂಕೆಗಳು ನುಗ್ಗುವುದು ಮಾಮೂಲಿಯಂತಾಗಿದೆ. ಆದ್ದರಿಂದ ಜಿಂಕೆಗಳನ್ನು ಬೆದರಿಸಲೆಂದೇ ಹಗಲು ರಾತ್ರಿ ಎನ್ನದೇ ಹೊಲದಲ್ಲಿ ಕಾದು ಕುಳಿತುಕೊಳ್ಳುತ್ತಿದ್ದಾರೆ. ಹಿಂದೆಲ್ಲ ಮನುಷ್ಯರನ್ನು ಕಂಡರೆ ಓಡಿ ಹೋಗುತ್ತಿದ್ದ ಜಿಂಕೆಗಳು ಈಗ ಧೈರ್ಯವಾಗಿ ಹೊಲಕ್ಕೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಜಾಗೃತಿಯಿಂದಾಗಿ ರೈತರು ಕೂಡ ವನ್ಯಜೀವಿಗಳನ್ನು ಹತ್ಯೆ ಮಾಡುವುದನ್ನು ನಿಲ್ಲಿಸಿದ್ದಾರೆ.

ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಳದಿ ರೋಗ, ಕೊಳೆ ರೋಗಕ್ಕೆ ತುತ್ತಾಗುತ್ತಿವೆ. ಈ ನಡುವೆ ಅಳಿದುಳಿದ ಫಸಲುಗಳನ್ನು ಜಿಂಕೆಗಳು ತಿಂದು ಹಾಕುತ್ತಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಫಕ್ಕೀರಗೌಡ ಗಾಜಿಗೌಡ್ರ ತಿಳಿಸಿದ್ದಾರೆ.

ಕೃಷ್ಣಮೃಗಗಳ ರಕ್ಷಣೆ ಕೂಡ ಮುಖ್ಯವಾಗಿದೆ. ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ಜಿಂಕೆಗಳು ತಿಂದು ನಾಶಪಡಿಸಿದ್ದರೆ ಅಂತಹ ರೈತರು ಅಗತ್ಯ ದಾಖಲಾತಿಗಳೊಂದಿಗೆ ಅರಣ್ಯ ಇಲಾಖೆಗೆ ಬಂದು ಅರ್ಜಿ ಸಲ್ಲಿಸಬೇಕು. ಬೆಳೆ ಹಾನಿ ಬಗ್ಗೆ ಖುದ್ದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ರೈತರ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಬಳಿಕ ಇ-ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಿ, ಅಂದಾಜು ನಷ್ಟ ಪರಿಹಾರ ಡಿಬಿಟಿ ಮೂಲಕ ರೈತರಿಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್‌ಅಜೀಜ್ ಶೇಖ್ ಹೇಳಿದ್ದಾರೆ.