ಸಾರಾಂಶ
ಮಿಮ್ಸ್ ನಿರ್ದೇಶಕರು ಹಾಗೂ ಆಸ್ಪತ್ರೆಯ ಅಧೀಕ್ಷಕರು ವೈದ್ಯರ ಅಹವಾಲುಗಳನ್ನು ಕೇಳುತ್ತಿಲ್ಲ. ರಾಜ್ಯಸರ್ಕಾರ ಕೂಡಲೇ ಮುಂಬಡ್ತಿ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೇ ೨೦ರ ಬಳಿಕ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಂಬಡ್ತಿ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಿಮ್ಸ್‌ನ ತುರ್ತು ಚಿಕಿತ್ಸಾ ಹಿರಿಯ ವೈದ್ಯಕೀಯ ಅಧಿಕಾರಿಗಳು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು.ನಗರದಲ್ಲಿರುವ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಹಿರಿಯ ವೈದ್ಯಾಧಿಕಾರಿಗಳು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮುಂಬಡ್ತಿಗೆ ಆಗ್ರಹಿಸಿದರು.
ತುರ್ತು ಚಿಕಿತ್ಸಾ ವಿಭಾಗದ ಹಿರಿಯ ವೈದ್ಯಾಧಿಕಾರಿ ಡಾ.ಯೋಗೇಂದ್ರಕುಮಾರ್ ಮಾತನಾಡಿ, ಕಳೆದ ೧೫ ದಿನಗಳಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇದುವರೆಗೂ ಮಿಮ್ಸ್ ಆಡಳಿತ ಮಂಡಳಿ ನಮ್ಮ ಬೇಡಿಕೆಗಳಿಗೆ ನಿರ್ಲಕ್ಷ್ಯ ತೋರಿದೆ. ನಮ್ಮ ಬೇಡಿಕೆಗಳನ್ನು ಪರಿಗಣಿಸಿ ಪದೋನ್ನತಿ ನೀಡಿ ಎಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಕಿಡಿಕಾರಿದರು.ಮಿಮ್ಸ್ ನಿರ್ದೇಶಕರು ಹಾಗೂ ಆಸ್ಪತ್ರೆಯ ಅಧೀಕ್ಷಕರು ವೈದ್ಯರ ಅಹವಾಲುಗಳನ್ನು ಕೇಳುತ್ತಿಲ್ಲ. ರಾಜ್ಯಸರ್ಕಾರ ಕೂಡಲೇ ಮುಂಬಡ್ತಿ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೇ ೨೦ರ ಬಳಿಕ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ೨೦೨೩ರಿಂದ ಬಾಕಿ ಇರುವ ೧೩ ವರ್ಷಗಳ ಕಾಲಮಿತಿ ಬಡ್ತಿ ಆಗಬೇಕಿದೆ, ೨೦೨೨ ರಿಂದ ಬಾಕಿ ಇರುವ ಜ್ಯೂನಿಯರ್ ಅಪಘಾತ ವೈದ್ಯಕೀಯ ಅಧಿಕಾರಿಗಳಿಗೆ ೬ ವರ್ಷಗಳ ಮೊದಲ ಬಾರಿಗೆ ಬಡ್ತಿ ಮಂಜೂರಾತಿ ಮಾಡಬೇಕಿದೆ ಎಂದು ಆಗ್ರಹಿಸಿದರು.ಮಿಮ್ಸ್ ಆಡಳಿತ ಮಂಡಳಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು. ಕೂಡಲೇ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಚಿವರು ನ್ಯಾಯಕೊಡಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಿಮ್ಸ್ ತುರ್ತು ಚಿಕಿತ್ಸಾ ವಿಭಾಗದ ಹಿರಿಯ ವೈದ್ಯಾಧಿಕಾರಿಗಳಾದ ಡಾ.ಹರೀಶ್, ಡಾ.ಸ್ವಾಮಿ, ಡಾ.ಅಬಿಬ್‌ಜಾನ್, ಡಾ.ಪುಷ್ಪರಾಣಿ, ಡಾ.ಸುಮಲತಾ ಸೇರಿ ಹಲವರು ಇದ್ದರು.