ಸಾರಾಂಶ
ತೀರ್ಥಹಳ್ಳಿ: ಬಿಸಿಲಿನ ಬೇಗೆ ಏರುತ್ತಿರುವ ಹಿನ್ನೆಲೆಯಲ್ಲಿ ನೀರಿನ ಕೊರತೆಯಾಗುವ ಸಾಧ್ಯತೆ ಇದೆ. ಮಳೆಗಾಲ ಆರಂಭವಾಗುವವರೆಗೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಸಮರೋಪಾದಿಯಲ್ಲಿ ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು.ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿ ಬುಧವಾರ ಗ್ರಾಮೀಣ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರಿನ ಕೊರತೆ ಇರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸರಬರಾಜಿಗೆ ನೀರಿಗೆ ಕೊರತೆಯಾದಲ್ಲಿ ಖಾಸಗಿ ಕೊಳವೆ ಬಾವಿಗಳಿಂದಲೂ ನೀರನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಟ್ಯಾಂಕರ್ ಬಾಡಿಗೆ ವೆಚ್ಚದ ಹಣವನ್ನು ಜಿಲ್ಲಾಡಳಿತದಿಂದ ಪಡೆಯಬಹುದಾಗಿದೆ ಎಂದರು.ಜೆಜೆಎಂ ಕುಡಿಯುವ ನೀರಿನ ಕುಡಿಯುವ ನೀರಿನ ಯೋಜನೆಯಲ್ಲಿ ಆಗಿರುವ ಕಳಪೆ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಕಳಪೆ ಕಾಮಗಾರಿಗೆ ಕಾರಣಾದವರಿಗೆ ನೋಟಿಸ್ ನೀಡಿ ಅಂತವರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದರು.ಈ ಯೋಜನೆಯಲ್ಲಿ ಅಳವಡಿಸಿರುವ ಉಪಕರಣಗಳ ಗುಣಮಟ್ಟವನ್ನು ಸಂಬಂಧಿಸಿದವರು ಪರಿಶೀಲನೆ ಮಾಡಬೇಕಿದೆ. ದೂರದ ಊರುಗಳಿಂದ ಬಂದವರು ಮಾಡಿರುವ ಕಾಮಗಾರಿಯಿಂದಾಗಿ ಸಮಸ್ಯೆ ಉದ್ಭವವಾಗಿದೆ. ಕಳಪೆಯಾಗಿದ್ದರೆ ಅಂತವನ್ನು ಗುರುತಿಸಿ ನನ್ನ ಗಮನಕ್ಕೆ ತರಬೇಕು. ನಿರ್ಮಾಣವಾಗಿರುವ ಟ್ಯಾಂಕ್ ಬಳಕೆಯಾಗದೇ ಇದ್ದಲ್ಲಿ ಬಿರುಕು ಬರುವುದು ಸಹಜ. ಅಂತವನ್ನು ಒಡೆದು ಹೊಸದಾಗಿ ನಿರ್ಮಿಸುವುದು ಅನಿವಾರ್ಯ ಎಂದು ಹೇಳಿದರು.ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅಣ್ಣಪ್ಪ ಸೇರಿದಂತೆ ಗ್ರಾಪಂ ಪಿಡಿಒಗಳು ಭಾಗವಹಿಸಿದ್ದರು.