ಗ್ಯಾರಂಟಿ ನೀಡಿ ಕಾಂಗ್ರೆಸ್‌ನಿಂದ ಬ್ಲಾಕ್‌ಮೇಲ್‌: ಮಟ್ಟಾರು

| Published : Apr 13 2024, 01:02 AM IST

ಸಾರಾಂಶ

ರಾಜ್ಯದ ಜನರಿಗೆ ಗ್ಯಾರಂಟಿಗಳು ಹೊಸದೇನಲ್ಲ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಭಾಗ್ಯಲಕ್ಷ್ಮೀ, ಶಾಲಾ ಮಕ್ಕಳಿಗೆ ಸೈಕಲ್ ಇತ್ಯಾದಿ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಿಗೆ ಇನ್ನೂ ಪೂರ್ತಿ ತಲುಪಿಯೇ ಇಲ್ಲ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಚಾರು ರತ್ನಾಕರ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಭರವಸೆ ಇಲ್ಲ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನು ಸಿಎಂ ಆಗಿ ಮುಂದುವರಿಯಬೇಕಾದರೇ 60 ಸಾವಿರ ಮತಗಳ ಲೀಡ್ ನೀಡಿ ಎಂದು ವರುಣಾದಲ್ಲಿ ಕೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂಬುದು ಖಾತರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಚಾರು ರತ್ನಾಕರ ಹೆಗ್ಡೆ ಹೇಳಿದರು.

ಅವರು ಶುಕ್ರವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ನೀಡಿ, ಈಗ ಮತ ನೀಡುವಂತೆ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿದೆ. ಆದರೆ ರಾಜ್ಯದ ಜನರಿಗೆ ಗ್ಯಾರಂಟಿಗಳು ಹೊಸದೇನಲ್ಲ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಭಾಗ್ಯಲಕ್ಷ್ಮೀ, ಶಾಲಾ ಮಕ್ಕಳಿಗೆ ಸೈಕಲ್ ಇತ್ಯಾದಿ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಿಗೆ ಇನ್ನೂ ಪೂರ್ತಿ ತಲುಪಿಯೇ ಇಲ್ಲ. ಕಾಂಗ್ರೆಸ್ ಮಂತ್ರಿಗಳು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದರು.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸದಾಗಿ ಸೇರ್ಪಡೆಯಾದ 1 ಲಕ್ಷ ಯುವ ಮತದಾರರು ಮತ್ತು ಜೆಡಿಎಸ್ ಮತದಾರರು ಬಿಜೆಪಿಯನ್ನು ಬೆಂಬಲಿಸುತ್ತಿರುವುದರಿಂದ, ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು 3 ಲಕ್ಷಕ್ಕೂ ಅಧಿಕತ ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮುಜರಾಯಿ, ಮೀನುಗಾರಿಕೆ, ಹಿಂದುಳಿದ ವರ್ಗ ಮತ್ತು ಸಮಾಜಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕ್ಷೇತ್ರದ ಜನತೆಗೆ ಪರಿಚಯಿಸುವ ಅಗತ್ಯ ಇಲ್ಲ. ಅವರು ಸಚಿವರಾಗಿ ಮಾಡಿದ ಕೆಲಸಗಳೇ ಅವರನ್ನು ಗೆಲ್ಲಿಸುತ್ತವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.