ದೆಹಲಿ ಪೊಲೀಸರು ನೀಡಿದ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಹೆದರಿಸಲು ಇದೆಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನೋಟಿಸ್ ಕೊಡುವಂತಹದ್ದೇನಿತ್ತು?
ಕನ್ನಡಪ್ರಭ ವಾರ್ತೆ ಹಾಸನ
ನನಗೆ, ಸುರೇಶ್‌ಗೂ ದೆಹಲಿ ಪೊಲೀಸರು ನೋಟಿಸ್ ಕೊಡ್ತಾರೆ ಅಂತ ನಿರೀಕ್ಷೆಯೇ ಇರಲಿಲ್ಲ. ನಮ್ಮನ್ನು ಅವರು ಕರೆಯೋ ಅಗತ್ಯವೇ ಇರಲಿಲ್ಲ. ಇಡಿಗೆ ನಾವು ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇಡಿಯ ಚಾರ್ಜ್‌ಶೀಟ್‌ನಲ್ಲಿ ನಮ್ಮ ಹೆಸರೇನು ಸೇರಿಸಲಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ದರು. ಈ ಹಂತದಲ್ಲಿ ಏಕಾಏಕಿ ಕರೆಯೋದು ಯಾಕೆ ಎಂಬುದು ಅರ್ಥವಾಗ್ತಿಲ್ಲ. ನೋಟಿಸ್ ಫುಲ್ ಓದಿದ್ದೇನೆ. ಲಾಯರ್ ಜೊತೆ ಮಾತಾಡಿ ವಿಚಾರಣೆಗೆ ಹೋಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ದೆಹಲಿ ಪೊಲೀಸರು ನೀಡಿದ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಹೆದರಿಸಲು ಇದೆಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನೋಟಿಸ್ ಕೊಡುವಂತಹದ್ದೇನಿತ್ತು? ಎಲ್ಲ ಬ್ಲಾಕ್ ಅಂಡ್ ವೈಟ್‌ನಲ್ಲಿ ಇದೆ. ನಮ್ಮ ಪಕ್ಷಕ್ಕೆ ನಾವು ದುಡ್ಡು ಕೊಡದೆ ಯಾರಿಗೆ ಕೊಡೋಣ? ಎನ್ನುವ ಮೂಲಕ ಡಿಸಿಎಂ ಕೇಂದ್ರ ತನಿಖಾ ಸಂಸ್ಥೆಗಳ ಕ್ರಮಗಳ ಕುರಿತು ಗಂಭೀರ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಟಿಯರ್ ವಾಚ್ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಯಾವ ಶರ್ಟ್ ಹಾಕ್ತಾರೆ, ಯಾರು ಯಾವ ವಾಚ್ ಹಾಕ್ತಾರೆ, ಯಾರು ಯಾವ ಕನ್ನಡಕ ಹಾಕ್ತಾರೆ? ಇದು ಅವರ ವೈಯಕ್ತಿಕ ವಿಚಾರ. ಕೆಲವರು ಸಾವಿರದ ಶೂ ಹಾಕ್ತಾರೆ, ಕೆಲವರು ಹತ್ತು ಸಾವಿರದ ಶೂ ಹಾಕ್ತಾರೆ, ಕೆಲವರು ಒಂದು ಲಕ್ಷದ ಶೂ ಹಾಕ್ತಾರೆ. ನಾನು ಒಂದು ಸಾವಿರದ ವಾಚೂ ಹಾಕ್ತೀನಿ, ಹತ್ತು ಲಕ್ಷದ ವಾಚೂ ಹಾಕ್ತೀನಿ? ಇದು ನನ್ನ ಸಂಪಾದನೆ, ನನ್ನ ಕಷ್ಟ, ನನ್ನ ಶ್ರಮ ಎಂದರು.ವಿರೋಧ ಪಕ್ಷದವರು ಗೊತ್ತಿಲ್ಲದೆ ಮಾತನಾಡಿದ್ದಾರೆ. ಪಾಪ. ಅವರಿಗೆ ರಾಜಕೀಯದ ಅನುಭವವೂ ಇಲ್ಲ. ಅವರು ಚುನಾವಣೆಗೆ ನಿಂತವರೂ ಅಲ್ಲ. ನನ್ನ ವ್ಯವಹಾರ, ನನ್ನ ಬದುಕು, ನನ್ನ ಹೋರಾಟ. ಬಿಜೆಪಿಯ ಶೇ. 90 ಜನರಿಗೆ ಗೊತ್ತಿದೆ. ನಾನು ಏನು ಹಾಕಿಕೊಂಡು ತಿರುಗ್ತೀನಿ ಎಂಬುದು ಯಾರಿಗೂ ತಲೆನೋವಾಗಬಾರದು. ನನ್ನ ವೈಯಕ್ತಿಕ ಜೀವನಕ್ಕೆ ರಾಜಕೀಯ ತಗಲಿಸಬೇಡಿ ಎಂದು ತಿರುಗೇಟು ನೀಡಿದರು.