ಕಮ್ಮಾರ ಜನಾಂಗ ಒಗ್ಗೂಡಿ ಮುಖ್ಯವಾಹಿನಿಗೆ ಬರಬೇಕು: ಚೆನ್ನಬಸವ ಸ್ವಾಮೀಜಿ

| Published : Dec 10 2024, 12:31 AM IST

ಕಮ್ಮಾರ ಜನಾಂಗ ಒಗ್ಗೂಡಿ ಮುಖ್ಯವಾಹಿನಿಗೆ ಬರಬೇಕು: ಚೆನ್ನಬಸವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಮ್ಮಾರ ಜನಾಂಗದವರು ಒಗ್ಗೂಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಎಂದು ವಿರಕ್ತ ಮಠದ ಚೆನ್ನಬಸವ ಸ್ವಾಮೀಜಿ ಸಲಹೆ ನೀಡಿದರು. ಚಾಮರಾಜನಗರದಲ್ಲಿ ಸಮುದಾಯ ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಸಾಧಕರಿಗೆ ಸನ್ಮಾನ

ಚಾಮರಾಜನಗರ: ಕಮ್ಮಾರ ಜನಾಂಗದವರು ಒಗ್ಗೂಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಎಂದು ವಿರಕ್ತ ಮಠದ ಚೆನ್ನಬಸವ ಸ್ವಾಮೀಜಿ ಸಲಹೆ ನೀಡಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಮ್ಮಾರ/ಗೆಜ್ಜಗಾರ ಸಮುದಾಯ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಜಿಲ್ಲೆಯ ಸಮುದಾಯ ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಮ್ಮಾರ ಜನಾಂಗವು ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು. ಸಮುದಾಯದವರೆಲ್ಲರೂ ಒಗ್ಗಟ್ಟಾಗುವ ಮೂಲಕ ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಮಾಜದಲ್ಲಿ ಮುಂದೆ ಬಂದು, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಹಿರಿಯ ವಕೀಲ ಎಲ್.ವಿರೂಪಾಕ್ಷ ಮಾತನಾಡಿ, ಕಮ್ಮಾರ ಜನಾಂಗವನ್ನು ಪ್ರಾಂತ್ಯ ಭಾಷೆಗಳಲ್ಲಿ ಹಲವು ಉಪನಾಮಗಳಲ್ಲಿ ಕರೆಯಲಾಗುತ್ತಿದೆ. ಈ ಸಮುದಾಯದ ಬಗ್ಗೆ ಬಸವಣ್ಣನವರ ಕಾಲದಿಂದಲೂ ಉಲ್ಲೇಖವಿದ್ದು, ಪ್ರಾಂತ್ಯ ಭಾಷೆಗಳಲ್ಲಿ ಇತರ ಉಪನಾಮಗಳಲ್ಲಿ ಕೂಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ತಾವು ಉಪನಾಮಗಳನ್ನು ಬಳಸದೆ ಕಮ್ಮಾರ ಎಂದೇ ತಾವು ಗುರುತಿಸಿಕೊಂಡರೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದರು.

ಇದೇ ವೇಳೆ ಜಿಲ್ಲೆಯ ಹಲವು ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದ ಮುಖಂಡರೆಲ್ಲರೂ ಚರ್ಚೆ ನಡೆಸಿ, ಕುಲ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಜನಾಂಗದ ಉಪನಾಮಗಳನ್ನು ಹೇಳದೆ ಕಮ್ಮಾರ ಎಂದು ಮಾಹಿತಿಯನ್ನು ನೀಡಲು ನಿರ್ಣಯ ಕೈಗೊಳ್ಳಲಾಯಿತು.

ನಂತರ ಸಮುದಾಯದ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಸುರೇಶ್, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಸಿಆರ್‌ಎಂ ಆರ್ಕೆಡ್ ಮಾಲೀಕ ಮಹದೇವಯ್ಯ ಸೇರಿದಂತೆ ಸಮುದಾಯ ಯಜಮಾನರು, ಮುಖಂಡರು ಹಾಜರಿದ್ದರು.