ಸಾರಾಂಶ
ತೆಂಗಿನ ತೋಟಗಳಲ್ಲಿ ಕಪ್ಪುತಲೆ ಹುಳು ಬಾಧೆ ನಿಯಂತ್ರಣ ಕುರಿತು ರೈತರಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ವಾಸನ ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ತೆಂಗಿನ ತೋಟಗಳಲ್ಲಿ ಕಪ್ಪುತಲೆ ಹುಳು ಬಾಧೆ ಕಂಡುಬಂದಿದೆ. ಈ ಹಿನ್ನೆಲೆ ಹರಿಹರ ತಾಲೂಕು ತೋಟಗಾರಿಕೆ ಮತ್ತು ದಾವಣಗೆರೆ ಪರೋಪಜೀವಿ ಪ್ರಯೋಗಾಲಯ ವತಿಯಿಂದ ರೈತರಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.ಕಪ್ಪುತಲೆ ಹುಳು ಬಾಧೆಯಿಂದ ಕೆಲವು ತೋಟಗಳಲ್ಲಿ ತೆಂಗಿನ ಮರಗಳು ಮುರಿದುಬಿದ್ದಿವೆ. ಕಂಗಾಲಾದ ರೈತರು ಹರಿಹರ ತಾಲೂಕು ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ, ಸಮಸ್ಯೆ ವಿವರಿಸಿದರು. ರೈತರ ಮನವಿಗೆ ಸ್ಪಂದಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್. ಎನ್ ಶಶಿಧರಸ್ವಾಮಿ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಕೀಟಬಾಧಿತ ಗರಿಗಳನ್ನು ಕತ್ತರಿಸಿ ತೋಟದ ಹೊರಗಡೆ ರಾಶಿ ಹಾಕಿ ಸುಡುಬೇಕು, ಉತ್ತಮ ಪೋಷಕಾಂಶಗಳ ನಿರ್ವಹಣೆ, ಇಲಾಖೆಯಲ್ಲಿ ದೊರೆಯುವ ಗೋನಿಯೋಜಸ್ ಪರೋಪಜೀವಿ ಹುಳುಗಳನ್ನು ತೋಟಗಳಲ್ಲಿ ಬಿಡುವುದು ಹಾಗೂ ಕೆಲವು ಔಷಧಿಗಳನ್ನು ಸಿಂಪರಣೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿಕೊಟ್ಟರು.ಇದೇ ವೇಳೆ ದಾವಣಗೆರೆಯ ಪರೋಪಜೀವಿ ಪ್ರಯೋಗಾಲಯದ ಎಚ್.ಎಸ್ ಪವನ್ ಕುಮಾರ್ ಪ್ರಾಯೋಗಿಕವಾಗಿ ಹತ್ತರಿಂದ ಹದಿನೈದು ಪರೋಪಜೀವಿಗಳನ್ನು ತೆಂಗಿನ ಮರಗಳಿಗೆ ಬಿಡುವ ರೀತಿಯ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಅನಂತರ ಯಾವ ರೈತರ ತೋಟಗಳು ಹಾನಿಯಾಗಿವೆಯೋ, ಅವರೆಲ್ಲರೂ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ಇಲಾಖೆಯ ಜಿ.ಆರ್ ಸಂತೋಷ್ ರೈತರಿಗೆ ತಿಳಿಸಿದರು.
ರೈತ ಮುಖಂಡ ಗುಂಡೇರಿ ಚಂದ್ರಶೇಖರಪ್ಪ ಮಾತನಾಡಿ, ರೈತರ ಜೀವನಕ್ಕೆ ತೆಂಗಿನ ತೋಟಗಳು ಆಧಾರವಾಗಿವೆ. ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕಪ್ಪುತಲೆ ಹುಳು ಬಾಧೆಯಿಂದ ತೋಟಗಳನ್ನು ರಕ್ಷಿಸಲು ಇಲಾಖೆಯೊಂದಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ರೈತರಿಗೆ ಜೀವನಾಶ್ರಯಕ್ಕೆ ತುಂಬಾ ತೊಂದರೆ ಆಗುತ್ತದೆ ಎಂದರು.ಈ ಸಂದರ್ಭ ತೋಟಗಾರಿಕೆ ಇಲಾಖೆ ಸಹಾಯಕ ಮಂಜುನಾಥ್, ರೈತರಾದ ಗಂಟೇರ ಅಂಜಿನಪ್ಪ, ಕುಶಪ್ಪರ ಚಂದ್ರಪ್ಪ, ಜಿ.ಮಲ್ಲಿಕಾರ್ಜುನ್, ಗಿರೀಶ್ ಮತ್ತಿತರರಿದ್ದರು.