ನುಡಿದಂತೆ ನಡೆದ ಕಾಂಗ್ರೆಸ್‍ಗೆ ಆಶೀರ್ವದಿಸಿ: ಸಚಿವ ಬಿ.ನಾಗೇಂದ್ರ

| Published : Apr 25 2024, 01:01 AM IST

ಸಾರಾಂಶ

ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳನ್ನು ಮೆಚ್ಚಿಕೊಂಡಿರುವ ರಾಜ್ಯದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಲಿದೆ.

ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಟಿ.ಬೂದಿಹಾಳು, ಗೋಡೆಹಾಳು ಮತ್ತು ಅಸುಂಡಿ ಗ್ರಾಮಗಳಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರವಾಗಿ ಮತಯಾಚನೆ ನಡೆಸಿದರು.ಈ ವೇಳೆ ಸಚಿವ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶೋಷಿತರ ಹಾಗೂ ಬಡವರ ಪರ ಇರುವ ಸರ್ಕಾರ. ಕಳೆದ ವಿಧಾನಸಭೆ ಚುನಾವಣೆ ವೇಳೆ ಹೇಳಿದಂತೆ ಭಾಗ್ಯಗಳನ್ನ ನಾಡಿನ ಜನತೆಗೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದೇವೆ. ನೀವು ತುಕಾರಾಂ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಕಳಿಸಿದರೆ, ಈ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಧ್ವನಿಯಾಗುತ್ತಾರೆ ಎಂದರು.

ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳನ್ನು ಮೆಚ್ಚಿಕೊಂಡಿರುವ ರಾಜ್ಯದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಲಿದೆ ಎಂದು ಹೇಳಿದ ನಾಗೇಂದ್ರ, ಈ ಬಾರಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ಗ್ಯಾರಂಟಿ ಯೋಜನೆಯ ಹಣ ದೊರೆಯಲಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕಾರಾಂ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಕಡೆವರೆಗೂ ನಿಮ್ಮ ಜೊತೆ ನಿಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ನಿಮ್ಮೊಟ್ಟಿಗೆ ಇರುವುದಾಗಿ ಸಚಿವ ಬಿ.ನಾಗೇಂದ್ರ ತಿಳಿಸಿದರು.

ಪ್ರಚಾರ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ, ಪಕ್ಷದ ಮುಖಂಡರಾದ ಸಣ್ಣಬಸವರಾಜ್, ಮಹಾರುದ್ರಗೌಡ, ವೆಂಕಟೇಶ್ ಪ್ರಸಾದ್, ಎ.ಮಾನಯ್ಯ, ಎಚ್.ತಿಮ್ಮನಗೌಡ, ಅಸುಂಡಿ ಹೊನ್ನೂರಪ್ಪ, ಅಣ್ಣ ನಾಗರಾಜ್, ಪಿ.ಜಗನ್ನಾಥ್, ಮುದಿ ಮಲ್ಲಯ್ಯ, ಬೆಣಕಲ್ ಬಸವರಾಜ್, ನಾಗಭೂಷಣಗೌಡ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.