ಸಿದ್ದರಾಮಯ್ಯ ಹೇಳಿಕೆ ನಂಗೆ ಆಶೀರ್ವಾದ: ವಿನಯಕುಮಾರ

| Published : May 05 2024, 02:11 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನನಗೆ ಆಶೀರ್ವಾದ ಇದ್ದಂತೆ. ದಾವಣಗೆರೆ ಲೋಕಸಭೆ ಟಿಕೆಟ್ ವಿಚಾರವಾಗಿ ನನ್ನ ಹೆಸರು ದೆಹಲಿ ಮಟ್ಟಕ್ಕೆ ತಲುಪುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದೇ ಸಿದ್ದರಾಮಯ್ಯನವರು ಎಂದು ದಾವಣಗೆರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದ್ದಾರೆ.

- ದೆಹಲಿಮಟ್ಟಕ್ಕೆ ನನ್ನ ಹೆಸರು ತಲುಪಿಸುವಲ್ಲಿ ಸಿಎಂ ಪಾತ್ರವೂ ಮಹತ್ವದ್ದು: ಪಕ್ಷೇತರ ಅಭ್ಯರ್ಥಿ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನನಗೆ ಆಶೀರ್ವಾದ ಇದ್ದಂತೆ. ದಾವಣಗೆರೆ ಲೋಕಸಭೆ ಟಿಕೆಟ್ ವಿಚಾರವಾಗಿ ನನ್ನ ಹೆಸರು ದೆಹಲಿ ಮಟ್ಟಕ್ಕೆ ತಲುಪುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದೇ ಸಿದ್ದರಾಮಯ್ಯನವರು ಎಂದು ದಾವಣಗೆರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಅನಿವಾರ್ಯತೆ ಇದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ತಮಗೆ ಮತ ನೀಡಿದಂತೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂದರು.

ಓರ್ವ ರಾಜಕಾರಣಿಯಾಗಿ ಸಿದ್ದರಾಮಯ್ಯ ಅಂತಹ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ವಿನಯಕುಮಾರ ಗೆದ್ದರೆ ಮೋದಿಯಿಂದ ಅನುದಾನ ತರಲು ಆಗುವುದಿಲ್ಲವೆಂದಿದ್ದಾರೆ. ಈ ಮೂಲಕ ನನಗೆ ಪರೋಕ್ಷವಾಗಿ ಸಿದ್ದರಾಮಯ್ಯ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

ಕಾಗಿನೆಲೆ ಸ್ವಾಮೀಜಿ ಹಾಗೂ ಸಿಎಂ ಸಿದ್ದರಾಮಯ್ಯ ನನಗೆ ಕಣದಿಂದ ಹಿಂದೆ ಸರಿಯುವಂತೆ ಹೇಳಿದಾಗ ಎರಡು ದಿನ ಕಾಲಾವಕಾಶ ಕೇಳಿದ್ದೆ. ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ನಾನು ಸ್ಪರ್ಧೆ ಮಾಡಿದ್ದೇನೆ. ಕೆ.ಎಸ್.ಈಶ್ವರಪ್ಪ ಕುಮ್ಮಕ್ಕು, ಭೈರತಿ ಬಸವರಾಜ ಹಿಂದಿದ್ದಾರೆಂಬುದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ. ಭೈರತಿ ಬಸವರಾಜರನ್ನು ಆರೇಳು ವರ್ಷದ ಹಿಂದೆ ಭೇಟಿ ಮಾಡಿದ್ದಷ್ಟೇ ಎಂದು ಸ್ಪಷ್ಟಪಡಿಸಿದರು.

4 ಲಕ್ಷಕ್ಕೂ ಅಧಿಕ ಮತ:

ಕೇವಲ ಸಿದ್ದೇಶ್ವರ, ಶಾಮನೂರು ಅವರ ಮನೆಯವರ ಸ್ಪರ್ಧೆಯಿಂದ ಮತದಾರರಿಗೆ ಇಬ್ಬರಲ್ಲಿ ಒಬ್ಬರಿಗೆ ಮತ ಹಾಕುವ ಅನಿವಾರ್ಯತೆ ಇತ್ತು. ಇದೀಗ ನನ್ನ ಸ್ಪರ್ಧೆಯಿಂದಾಗಿ ಹೊಸ ಮುಖ, ಹೊಸಬರಿಗೆ, ಬದಲಾವಣೆಗೂ ಮತದಾರರಿಗೆ ಅ‍ವಕಾಶ ಸಿಕ್ಕಂತಾಗಿದೆ. ಆದರೆ, ನನ್ನ ವ್ಯಕ್ತಿತ್ವ, ವೇಗವನ್ನು ಗುರುತಿಸಿ, ಸಾಕಷ್ಟು ಅಹಿಂದ ಮತ್ತು ಪಂಚಮಸಾಲಿ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ಕನಿಷ್ಠ 4 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ನಾನು ಪಡೆಯುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಈಗಾಗಲೇ ಬಿಜೆಪಿಯ ಎಲ್ಲ ಕ್ಷೇತ್ರದ ಮುಖಂಡರು ಸಂಸದರ ವರ್ತನೆಯಿಂದ ಸಿಡಿದೆದ್ದಿದ್ದಾರೆ. ನಾನು ಯಾರಿಗೂ ಕರೆ ಮಾಡಿಲ್ಲ. ಬೇಕೆಂದರೆ ನನ್ನ ಕಾಲ್ ಲೀಸ್ಟ್ ಪರಿಶೀಲಿಸಲಿ. ಮುಖ್ಯಮಂತ್ರಿ ಅವರಿಗೆ ಸ್ಥಳೀಯ ನಾಯಕರು ಸುಳ್ಳು ಮಾಹಿತಿ ನೀಡಿದ್ದಾರಷ್ಟೇ. ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಿಂದ ಕಾಂಗ್ರೆಸ್ಸಿಗಷ್ಟೇ ಅಲ್ಲ, ಬಿಜೆಪಿಗೂ ಭಯ ಇದೆ. ರಾಜ್ಯದಲ್ಲಿ 28 ಸಂಸದರಿದ್ದು, ಇವಿಎಂನಲ್ಲಿ ನನ್ನದು 28ನೇ ಕ್ರಮ ಸಂಖ್ಯೆ. 28 ಸಂಸದರಲ್ಲಿ ನಾನೂ ಒಬ್ಬ. ಕನಿಷ್ಠ 20-25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಜಿ.ಬಿ.ವಿನಯಕುಮಾರ ಹೇಳಿದರು.

- - - ಕೋಟ್‌ಭೈರತಿ ಬಸವರಾಜ ನನ್ನ ಮನೆಯನ್ನೂ ನೋಡಿಲ್ಲ. ನನ್ನನ್ನು ಭೇಟಿಯಾಗಿಲ್ಲ, ನಾನೂ ಭೇಟಿ ಮಾಡಿಲ್ಲ. ಯಾವುದೇ ಡೀಲ್ ನಡೆದಿಲ್ಲ. ಉದ್ದೇಶಪೂರ್ವಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡಿಸಿದ್ದಾರೆ. ಈಗಾಗಲೇ ದಾವಣಗೆರೆ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ದಿನದಿಂದ ದಿನಕ್ಕೆ ಬೆಂಬಲ ಮತ್ತು ವರ್ಚಸ್ಸು ಹೆಚ್ಚಾಗುತ್ತಿದೆ

- ವಿನಯಕುಮಾರ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ

- - - -4ಕೆಡಿವಿಜಿ15:

ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ