ಸಾರಾಂಶ
ಕಣ್ಣು ಕಾಣದ ಆನೆ ಸಾವು
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಕಳೆದ ಒಂದೂವರೆ ತಿಂಗಳಿನಿಂದ ಆಹಾರಕ್ಕಾಗಿ ಹಾರಂಗಿ ಹಿನ್ನೀರಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಣ್ಣು ಕಾಣದ ಕಾಡಾನೆ ನಿತ್ರಾಣಗೊಂಡು ಸಾವನ್ನಪ್ಪಿರುವ ಘಟನೆ ಸಜ್ಜಳ್ಳಿ ಗ್ರಾಮದಲ್ಲಿ ನಡೆದಿದೆ.ಆಹಾರವಿಲ್ಲದೆ ಅಸ್ವಸ್ಥವಾಗಿರುವ ೩೫ ವರ್ಷ ಪ್ರಾಯದ ಹೆಣ್ಣಾನೆಗೆ ಶುಕ್ರವಾರ ಬೆಳಗ್ಗೆ ನಿವೃತ್ತ ಪಶುವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ ಚಿಕಿತ್ಸೆ ನೀಡಿದ್ದಾರೆ. ೪೦ ಯೂನಿಟ್ ಗ್ಲೂಕೋಸ್ ಹಾಗೂ ಇಂಜೆಕ್ಷನ್ ನೀಡಲಾಗಿದೆ. ಆದರೆ ಹೆಣ್ಣಾನೆ ನಿತ್ರಾಣಗೊಂಡು ಸಾವನ್ನಪ್ಪಿದೆ.
ಆನೆಯ ಒಂದು ಕಣ್ಣು ಸಂಪೂರ್ಣ ಕುರುಡಾಗಿದ್ದು, ಬೇಕಾದ ಆಹಾರವನ್ನು ಪಡೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಿತ್ರಾಣಗೊಂಡಿದೆ. ಕುಡಿಯುವ ನೀರಿಗಾಗಿ ಹಾರಂಗಿ ಹಿನ್ನೀರಿಗೆ ಬಂದು ಕುಸಿದು ಬಿದ್ದಿದೆ ಎಂದು ಚಿಟ್ಟಿಯಪ್ಪ ಹೇಳಿದರು.ಕಳೆದ ಒಂದೂವರೆ ತಿಂಗಳಿನಿಂದ ಸಜ್ಜಳ್ಳಿ, ಯಡವಾರೆ, ಯಡವನಾಡು ಗ್ರಾಮಗಳಲ್ಲಿ ಹಗಲಿನ ವೇಳೆ ಹೆಣ್ಣಾನೆ ಕಾಣಿಸಿಕೊಳ್ಳುತ್ತಿತ್ತು. ಆ ಸಂದರ್ಭದಲ್ಲೇ ಚಿಕಿತ್ಸೆ ನೀಡಿದ್ದರೆ ಬದುಕಿಸಿಕೊಳ್ಳಬಹುದಿತ್ತು ಎಂದು ಯಡವಾರೆ ಗ್ರಾಮದ ಕೃಷಿಕ ಮಚ್ಚಂಡ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.೨೫ ದಿನಗಳ ಹಿಂದೆ ಸಜ್ಜಳ್ಳಿ ಹಾಡಿ ಪಕ್ಕದಲ್ಲೇ ಕಾಡಾನೆ ತಿರುಗಾಡುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ೧೫ ದಿನಗಳ ಹಿಂದೆ ಹೆಣ್ಣಾನೆಗೆ ಎರಡು ಕಣ್ಣು ಕಣುವುದಿಲ್ಲ ಎಂದು ತಿಳಿದುಬಂತು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಹೆಣ್ಣಾನೆಯ ಮೇಲೆ ನಿಗಾ ಇರಿಸಿದರು. ಆದರೆ ದುರದೃಷ್ಟವಶಾತ್ ಕಾಡಾನೆ ಸಾವನ್ನಪ್ಪಿದೆ ಎಂದು ಎಸಿಎಫ್ ಎ.ಎ.ಗೋಪಾಲ್ ತಿಳಿಸಿದ್ದಾರೆ.