ಸಾರಾಂಶ
ಅಂಧ ಮಹಿಳಾ ಕ್ರಿಕೆಟ್ ರಾಷ್ಟ್ರೀಯ ಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಓಡಿಸಾ ತಂಡ ಕರ್ನಾಟಕ ತಂಡವನ್ನು ಪರಾಭವಗೊಳಿಸಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ದೇಶಪಾಂಡೆ ನಗರದ ಕೆಜಿಎ ಮೈದಾನದಲ್ಲಿ ನಡೆದ ಅಂಧ ಮಹಿಳಾ ಕ್ರಿಕೆಟ್ ರಾಷ್ಟ್ರೀಯ ಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಓಡಿಸಾ ತಂಡ ಕರ್ನಾಟಕ ತಂಡವನ್ನು ಪರಾಭವಗೊಳಿಸಿತು. ಜಮುನಾ ರಾಣಿ ತುಡು, ಬಸಂತಿ ಎಚ್ ಜೊತೆಯಾಟ ಓಡಿಸಾ ಗೆಲುವಿಗೆ ನೆರವಾಯಿತು.ಟಾಸ್ ಗೆದ್ದ ಒಡಿಸಾ ತಂಡ ಕರ್ನಾಟಕ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 18.3 ಓವರ್‌ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 93 ರನ್‌ಗೆ ತೃಪ್ತಿಪಟ್ಟುಕೊಂಡಿತು.
ಈ ಗುರಿ ಬೆನ್ನತ್ತಿದ ಒಡಿಸಾ ತಂಡದ ಆರಂಭಿಕ ಆಟಗಾರರಿಬ್ಬರು ಬೇಗ ವಿಕೆಟ್ ಒಪ್ಪಿಸಿದರು. ನಾಯಕಿ ಪೌಲಾ ಸರೀನ್ ಅವರನ್ನು ಕರ್ನಾಟಕ ಬೌಲರ್ ಸುನಿತಾ ಡಿ. ಅವರು ಮೊದಲ ಎಸೆತದಲ್ಲಿ ಔಟ್ ಮಾಡಿದರು. ಬಳಿಕ ಕ್ರಿಜ್‌ಗೆ ಬಂದ ಜಮುನಾ, ಬಸಂತಿ ಎಚ್. ಅವರು ರನ್‌ಗಳಿಸಿಸುವ ಮೂಲಕ ತಂಡಕ್ಕೆ ನೆರವಾದರು.ಜಮುನಾ ರಾಣಿ ತುಡು (24ರನ್, 23 ಬಾಲ್) ಹಾಗೂ ಬಸಂತಿ ಎಚ್. ಅವರ ಉತ್ತಮ ಬ್ಯಾಟಿಂಗ್‌ನಿಂದ ಒಡಿಸಾ ತಂಡ ಅತಿಥೇ ಕರ್ನಾಟಕ ತಂಡ ವಿರುದ್ಧ 6 ವಿಕೆಟ್‌ಗಳಿಂದ ಜಯಗಳಿಸಿತು. ಈ ಮೂಲಕ ಟೂರ್ನಿಯಲ್ಲಿ ಗೆಲುವು ಸಾಧಿಸಬೇಕು ಎಂದುಕೊಂಡಿದ್ದ ಕರ್ನಾಟಕ ತಂಡ ಕನಸು ನುಚ್ಚುನೂರಾಯಿತು. ಪ್ಲೇಯರ್ ಆಫ್ ದಿ ಮ್ಯಾಚ್ ಜಿಹಿಲಿ ಬಿರುವಾ ಪಡೆದರು.
ಟೂರ್ನಿ ಜಯಗಳಿಸಿದ ತಂಡಕ್ಕೆ ₹1.4 ಲಕ್ಷ, ಆಕರ್ಷಕ ಟ್ರೋಫಿ, ರನರ್ ಆಫ್ ತಂಡಕ್ಕೆ 80 ಸಾವಿರ, ಆಕರ್ಷಕ ಟ್ರೋಫಿ ನೀಡಲಾಯಿತು. ಪ್ಲೇಯರ್ ಆಫ್ ದಿ ಸಿರಿಜ್ ಮೂರು ವಿಭಾಗಕ್ಕೆ ನೀಡಲಾಗಿದ್ದು, ಬಿ1ನಲ್ಲಿ ರಾಜಸ್ಥಾನದ ಸಿಮುದಾಸ್, ಬಿ2 ದೆಹಲಿಯ ಮೇನಕಾಕುಮಾರಿ ಹಾಗೂ ಬಿ3 ಒಡಿಸಾದ ಆಟಗಾರ್ತಿ ಜಿಹಿಲಿ ಬಿರುವಾ ಭಾಜನರಾದರು.