ಧಾರವಾಡ:

₹ 703 ಬೆಲೆಯ ನಾಯಿಯ ಆಹಾರ ವಿಚಾರವಾಗಿ ಗ್ರಾಹಕರೊಬ್ಬರಿಗೆ ಮೋಸ ಮಾಡಿದ ಬ್ಲಿಂಕಿಟ್‌ ಕಂಪನಿಯು ಇದೀಗ ಬರೋಬ್ಬರಿ ₹ 35 ಸಾವಿರ ದಂಡ ತೆರಬೇಕಾದ ಸಂದರ್ಭ ಬಂದಿದೆ.

ಆನ್‌ಲೈನ್ ಮೂಲಕ ನಾಯಿಯ ಆಹಾರ ಖರೀದಿಸಿದ ಸಾರಸ್ವತಪೂರ ದೇಸಾಯಿ ಕಾಲನಿಯ ಲಕ್ಷ್ಮಿ ಬಸವರಾಜ ನೇಗಿನಾಳ ಎಂಬ ವಕೀಲರೊಬ್ಬರಿಗೆ ಮೋಸವಾಗಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೋಸ ಮಾಡಿದ ಬ್ಲಿಂಕಿಟ್‌ ಕಂಪನಿಗೆ ದಂಡ ಮತ್ತು ಪರಿಹಾರಕ್ಕೆ ಆದೇಶ ಮಾಡಿದೆ.

ಲಕ್ಷ್ಮೀ ಅವರು ಬ್ಲಿಂಕಿಟ್‌ನಲ್ಲಿ 2025ರ ಮೇ ತಿಂಗಳ 20ರಂದು ತಮ್ಮ ಸಾಕಿದ ನಾಯಿಗೆ ವಿಲ್ಡರ್‌ನೆಸ್-ಚಿಕನ್ ಮತ್ತು ವೆಜಿಟೇಬಲ್ ಆಹಾರ ತರಿಸಿದ್ದರು. ಕಂಪನಿ ವೆಬ್‌ಸೈಟ್‌ನಲ್ಲಿ ಒಂದು ಖರೀದಿಸಿದರೆ ಮತ್ತೊಂದು ಉಚಿತ ಎಂದು ಈ ಬಗ್ಗೆ ಜಾಹೀರಾತು ನೀಡಿದ್ದರು. ಅದಕ್ಕಾಗಿ ಅವರು ₹ 703 ಸಂದಾಯ ಮಾಡಿದ್ದರು.

ಬ್ಲಿಂಕಿಟ್‌ನ ವಿತರಕ ಒಂದು ನಾಯಿಯ ಆಹಾರವನ್ನು ಮಾತ್ರ ಡೆಲೆವರಿ ಮಾಡಿದ್ದರು. ಉಚಿತ ವಸ್ತುವನ್ನು ಡೆಲಿವರಿ ಮಾಡಲಿಲ್ಲ. ಕಸ್ಟಮರ್‌ ಕೇರಿಗೆ ಹಲವು ಬಾರಿ ಪೋನ್‌ ಮತ್ತು ಮೇಲ್‌ ಮಾಡಿದರೂ ಸ್ಪಂದನೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ, ಮೊದಲಿಗೆ ಉಚಿತ ಆಹಾರ ಪೊಟ್ಟಣವನ್ನು ದೂರುದಾರರಿಗೆ ನೀಡಬೇಕು. ಇಲ್ಲವಾದಲ್ಲಿ ಅದರ ಮೊತ್ತ ₹ 703 ಬಡ್ಡಿಯೊಂದಿಗೆ ಹಿಂದಿರುಗಿಸಬೇಕು. ಅನಾನುಕೂಲತೆ, ಮಾನಸಿಕ ಹಿಂಸೆಗೆ ₹ 25 ಸಾವಿರ ಪರಿಹಾರ ಹಾಗೂ ಪ್ರಕರಣದ ವೆಚ್ಚವಾಗಿ ₹ 10 ಸಾವಿರ ಕೊಡುವಂತೆ ಸಪ್ತಾಪುರದ ಬ್ಲಿಂಕಿಟ್‌ ಕಂಪನಿಗೆ ಆಯೋಗ ಆದೇಶಿಸಿದೆ ಎಂದು ಆಯೋಗದ ಸಹಾಯಕ ರಜಿಸ್ಟ್ರಾರ್‌ ತಿಳಿಸಿದ್ದಾರೆ.