ಹೆದ್ದಾರಿ ಬಂದ್ ಮಾಡಿ ಸಂತ್ರಸ್ತರ ಹೋರಾಟ

| Published : Dec 06 2024, 09:01 AM IST

ಹೆದ್ದಾರಿ ಬಂದ್ ಮಾಡಿ ಸಂತ್ರಸ್ತರ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬೀಳಗಿಯಲ್ಲಿ ಹೆದ್ದಾರಿ ತಡೆದ ಸಂತ್ರಸ್ತರು, ಬಾಗಲಕೋಟೆ ಯುಕೆಪಿ ಮಹಾ ವ್ಯವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಶೀಘ್ರ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯ ಕಾವು ತೀವ್ರತೆ ಪಡೆದುಕೊಂಡಿದೆ.

ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೋರಾಟ ಗುರುವಾರ ಕಾವು ಪಡೆದುಕೊಂಡಿತ್ತು. ಬೀಳಗಿಯಲ್ಲಿ ಹೆದ್ದಾರಿ ತಡೆದ ಸಂತ್ರಸ್ತರು, ಬಾಗಲಕೋಟೆ ಯುಕೆಪಿ ಮಹಾ ವ್ಯವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಎಸ್ಪಿ ಕಚೇರಿ ರಸ್ತೆ, ಅಗ್ನಿ ಶಾಮಕದಳ ಕಚೇರಿ ಮೂಲಕ ಯುಕೆಪಿ ಕಚೇರಿ ತಲುಪಿತು. ಬಳಿಕ ಕಚೇರಿಗೆ ಮುತ್ತಿಗೆ ಹಾಕಲು ಸಂತ್ರಸ್ತರು ಮುಂದಾದರು. ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಮಾತಿನ ಚಕಮಕಿ ಉಂಟಾಗಿ ಕೊನೆಗೆ ಸಮಾಪ್ತಿಗೊಂಡಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ನಾವು ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ನಮಗೆ ದ್ರೋಹ ಮಾಡುವ ಉದ್ದೇಶವಿಲ್ಲ. ಆದರೆ ದೇಶಕ್ಕೆ ಅನ್ನ ಹಾಕುವ ರೈತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ನಮ್ಮ ಮನವಿ, ಧ್ವನಿ ಆಲಿಸಲು ಯುಕೆಪಿ ಅಧಿಕಾರಿಗಳು ಆಗಮಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಶಾಸಕ ಸಿದ್ದು ಸವದಿ, ಸಮಿತಿ ಗೌರವ ಅಧ್ಯಕ್ಷ ಅಜಯಕುಮಾರ ಸರನಾಯಕ, ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಮುಖಂಡ ಚಂದ್ರಶೇಖರ ರಾಠೋಡ, ಡಿ.ಬಿ.ಪೂಜಾರ, ನಾಗೇಶ ಗೋಲಶೆಟ್ಟಿ, ಪ್ರಕಾಶ ಅಂತರಗೊಂಡ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಂತ್ರಸ್ತರ ಹೋರಾಟ ಮೂರನೇ ದಿನಕ್ಕೆ:

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ನಡೆಯುತ್ತಿರುವ ಸಂತ್ರಸ್ತರ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ತೀವ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ಗುರುವಾರ ಬೆಳಗ್ಗೆ ಬೀಳಗಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು, ಎಸ್ಎಲ್ಓ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಸ್ಪಂದಿಸದ ಹಿನ್ನೆಲೆ ರೊಚ್ಚಿಗೆದ್ದ ಮುಳುಗಡೆ ಸಂತ್ರಸ್ತರು ಬೀಳಗಿ ಕ್ರಾಸ್ ಬಳಿ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದರು. ಐದರಿಂದ ಆರು ಕಿ.ಮೀ. ವರೆಗೆ ಟ್ರಾಫಿಕ್ ಜಾಮ್ ಆಗಿದ್ದು ಕಂಡು ಬಂದಿತು.

ಬಿಜೆಪಿಯ ಜಗದೀಶ ಹಿರೇಮನಿ ಬೆಂಬಲ:

ನವನಗರದ ಜಿಲ್ಲಾಡಳಿತ ಭವನ ಎದುರು ಹೋರಾಟದ ಸ್ಥಳಕ್ಕೆ ಬಿಜೆಪಿ ಮುಖಂಡ ಜಗದೀಶ ಹಿರೇಮನಿ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರು ದೇಶಕ್ಕಾಗಿ ತ್ಯಾಗ ಮಾಡಿದ್ದು. ಇವರನ್ನು ಸರ್ಕಾರವು ಗೌರವದಿಂದ ಕಾಣಬೇಕು. ಸೂಕ್ತ ಪರಿಹಾರ ನೀಡಿ ಆದಷ್ಟು ಬೇಗ ಯುಕೆಪಿ ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಯಾವುದೇ ಸರ್ಕಾರ ಇರಲಿ ಸಂತ್ರಸ್ತರ ವಿಷಯದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದರು.