ಹೊನ್ನಾಳಿ ಪಟ್ಟಣದಲ್ಲಿ ನಾಕಾಬಂದಿ ಅಣಕು ಕಾರ್ಯಕ್ರಮ

| Published : Feb 06 2025, 12:17 AM IST

ಸಾರಾಂಶ

ಆಪರೇಷನ್ ರೆಡ್ ಡಾಟ್ ಹೆಸರಿನಲ್ಲಿ ಭಾನುವಾರ ಸಂಜೆ ಎಎಸ್‌ಪಿ ಸ್ಯಾಂ ವರ್ಗಿಸ್ ನೇತೃತ್ವದಲ್ಲಿ ಚನ್ನಗಿರಿ ಉಪ ವಿಭಾಗದಲ್ಲಿ ಪೊಲೀಸ್ ನಾಕಾಬಂದಿ ಹಾಕಿ, ಆರೋಪಿಗಳನ್ನು ತಕ್ಷಣದಲ್ಲಿ ಹಿಡಿಯುವ ಅಣುಕು ಪ್ರದರ್ಶನ ಹೊನ್ನಾಳಿ ಸೇರಿದಂತೆ ಚನ್ನಗಿರಿ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯಿತು.

- ಎಎಸ್‌ಪಿ ಸ್ಯಾಂ ವರ್ಗಿಸ್ ನೇತೃತ್ವದಲ್ಲಿ ಆಪರೇಷನ್ ರೆಡ್ ಡಾಟ್ ಹೆಸರಲ್ಲಿ ಪ್ರದರ್ಶನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಆಪರೇಷನ್ ರೆಡ್ ಡಾಟ್ ಹೆಸರಿನಲ್ಲಿ ಭಾನುವಾರ ಸಂಜೆ ಎಎಸ್‌ಪಿ ಸ್ಯಾಂ ವರ್ಗಿಸ್ ನೇತೃತ್ವದಲ್ಲಿ ಚನ್ನಗಿರಿ ಉಪ ವಿಭಾಗದಲ್ಲಿ ಪೊಲೀಸ್ ನಾಕಾಬಂದಿ ಹಾಕಿ, ಆರೋಪಿಗಳನ್ನು ತಕ್ಷಣದಲ್ಲಿ ಹಿಡಿಯುವ ಅಣಕು ಪ್ರದರ್ಶನ ಹೊನ್ನಾಳಿ ಸೇರಿದಂತೆ ಚನ್ನಗಿರಿ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯಿತು.

ಸಿಪಿಐ ಸುನೀಲ್‌ಕುಮಾರ್‌ ಈ ಸಂದರ್ಭ ಮಾತನಾಡಿ, ಚನ್ನಗಿರಿ ಪೊಲೀಸ್‌ ಉಪವಿಭಾಗ ವ್ಯಾಪ್ತಿಯಲ್ಲಿ ಎಲ್ಲಿಯೇ ಸರಗಳ್ಳತನ, ಕೊಲೆ, ವಾಹನಗಳ ಕಳವು ಮುಂತಾದ ಅಪರಾಧ ಘಟನೆಗಳನ್ನು ನಡೆಸಿ, ಪರಾರಿಯಾಗುವ ಪ್ರಯತ್ನ ನಡೆಸುತ್ತಾರೆ. ಇಂಥ ವೇಳೆ ಕೂಡಲೇ ಸಾರ್ವಜನಿಕರು ಪೊಲೀಸ್ ಉಪವಿಭಾಗಕ್ಕೆ ನೈಜ ಮಾಹಿತಿ ನೀಡಿದಲ್ಲಿ ಉಪವಿಭಾಗದ ವ್ಯಾಪ್ತಿಗೆ ಬರುವ ಎಲ್ಲ ಕಡೆಗೆ ನಾಕಾಬಂದಿ ಹಾಕಲಾಗುತ್ತದೆ. ಆಗ ಅಪರಾಧ ಎಸಗಿದ ಆರೋಪಿಗಳು ಸಿಕ್ಕೇ ಸಿಗುತ್ತಾರೆ. ಆದ್ದರಿಂದ ಪೊಲೀಸರ ಪ್ರಯತ್ನಕ್ಕೆ ಸಾರ್ವಜನಿಕರು ಸಹ ಕೈ ಜೋಡಿಸಿ, ಸಕಾಲದಲ್ಲಿ ನೆರವಾಗಬೇಕು ಎಂದರು.

ಇತ್ತೀಚಿಗೆ ನಾವೂ ತಾಲೂಕಿನಾದ್ಯಂತ ರಾತ್ರಿ ಪೊಲೀಸ್‌ ಬೀಟ್ ಹೆಚ್ಚು ಮಾಡಿದ್ದೇವೆ. ಪ್ರಸ್ತುತ ಚಳಿಗಾಲ ಆಗಿರುವುದರಿಂದ ಸಾರ್ವಜನಿಕರು ಹೆಚ್ಚು ಹೊರಗೆ ಬರುವುದಿಲ್ಲ. ಈ ಸಮಯದಲ್ಲಿ ಅಪರಾಧಗಳು ನಡೆಯಬಹುದು. ನೀವು ಸಹ ಹೊರಗಡೆ ನಡೆಯುವ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕು. ನನಗೆ ಅಂಥ ಪ್ರಕರಣ ಸಂಬಂಧವೇ ಇಲ್ಲ ಎಂದು ಮನೆಯಲ್ಲಿ ಕುಳಿತರೆ ಅಪರಾಧಗಳು ಹೆಚ್ಚಾಗುತ್ತವೆ. ಆದ್ದರಿಂದ ನಿಮ್ಮ ಸಂಪರ್ಕ ನಮ್ಮ ಪೊಲೀಸ್‌ ಠಾಣೆ ಜತೆ ಸದಾ ಇರಲಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಲೂಕಿನ ಸಾಸ್ವೇಹಳ್ಳಿ, ಕುಂದೂರು, ಹೊನ್ನಾಳಿ, ಸವಳಂಗ, ಹೊಳೆ ಹರಳಹಳ್ಳಿ, ಚೀಲೂರು, ಮಾವಿನಕಟ್ಟೆ ಸೇರಿದಂತೆ ನಗರ ಪ್ರದೇಶಗಳ ವಿವಿಧ ಕಡೆಗಳಲ್ಲಿ ನಾಕಾಬಂದಿ ಹಾಕಿ, ಪೊಲೀಸರು ಕಾರ್ಯನಿರ್ವಹಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸಾರ್ವಜನಿಕರ ಆಶ್ಚರ್ಯ: ದಿಢೀರನೇ ಪೊಲೀಸರು ಎಲ್ಲ ಗಡಿಗಳಲ್ಲಿ ನಾಕಾಬಂದಿ ಹಾಕಿ, ಪ್ರತಿ ವಾಹನಗಳನ್ನು ತಪಾಸಣೆ ಮಾಡಲಾರಂಭಿಸಿದರು. ಯಾವುದೋ ದೊಡ್ಡ ಅಪರಾಧ ನಡೆದಿರಬಹದು ಎಂದು ಸಾರ್ವಜನಿಕರು ನಿಬ್ಬೆರಗಾದರು. ಪೊಲೀಸರ ಕಡೆಗೇ ಎಲ್ಲರ ಗಮನ ಹರಿಯಿತು. ಕೆಲ ನಿಮಿಷಗಳ ಬಳಿಕವೇ ಗೊತ್ತಾಗಿದ್ದು, ಇದು ಜನರಲ್ಲಿ ನಾಕಾಬಂದಿ ಕುರಿತು ಮಾಹಿತಿ ನೀಡುವ ಅಣುಕು ಪ್ರದರ್ಶನ ಎಂಬುದು.

- - - -3ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ನಗರದ ಟಿ.ಬಿ. ಸರ್ಕಲ್‌ನಲ್ಲಿ ಪೊಲೀಸರು ಅಣಕು ನಾಕಾಬಂದಿ ಪ್ರದರ್ಶಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭ ಸಿಪಿಐ ಸುನೀಲ್ ಕುಮಾರ್, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.