ಪುತ್ತೂರು: ಕರ್ನಾಟಕದಿಂದ ಅಡಕೆ ಸಾಗಾಟ ಮಾಡುತ್ತಿರುವ ಲಾರಿಗಳನ್ನು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಅಧಿಕಾರಿಗಳು ಗುಣಮಟ್ಟ ಪರೀಕ್ಷೆ ನೆಪದಲ್ಲಿ ಮುಟ್ಟುಗೋಲು ಹಾಕಿ ಕಿರುಕುಳ ನೀಡುತ್ತಿದ್ದಾರೆ. ಈ ಸಮಸ್ಯೆ ತಕ್ಷಣವೇ ಪರಿಹರಿಸದಿದ್ದರೆ ಎಲ್ಲ ಅಡಿಕೆ ವರ್ತರು ಜೂ. ೨೪ರಿಂದ ರೈತರಿಂದ ಅಡಿಕೆ ಖರೀದಿ ಮಾಡುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಅಡಕೆ ವರ್ತಕರ ಸಂಘದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪುತ್ತೂರು ಅಡಿಕೆ ವರ್ತಕರ ಸಂಘದ ತುರ್ತು ಸಭೆಯು ಅಧ್ಯಕ್ಷ ರವೀದ್ರನಾಥ ರೈ ಬಳ್ಳಮಜಲು ಅಧ್ಯಕ್ಷತೆಯಲ್ಲಿ ಶನಿವಾರ ಎಪಿಎಂಸಿಯ ರೈತ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು ಅಡಿಕೆಗೆ ರಾಸಾಯನಿಕ ಬೆರೆಸಿರುವ ಆರೋಪದಲ್ಲಿ ಅಲ್ಲಿನ ಅಧಿಕಾರಿ ವರ್ಗ ಲಾರಿಗಳನ್ನು ತಡೆದು ಅದರ ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿಯ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅಡಿಕೆ ವರ್ತಕರು ಸರಕಾರಕ್ಕೆ ನ್ಯಾಯಬದ್ಧ ತೆರಿಗೆ ಪಾವತಿಸಿ ವ್ಯಾಪಾರ ಮಾಡುತ್ತಿದ್ದರೂ, ಅಧಿಕಾರಿ ವರ್ಗ ತಾವು ಖಡಕ್ ಎಂದು ತೋರಿಸಿಕೊಳ್ಳಲು ತೊಂದರೆ ನೀಡುತ್ತಿದ್ದಾರೆ. ಅಡಿಕೆ ಲಾರಿಗಳನ್ನು ತಡೆದ ಪರಿಣಾಮ ಧಾರಣೆ ಕುಸಿದು ಕೃಷಿಕರಿಗೂ ತೊಂದರೆಯಾಗುವ ಜತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಗೂ ಹೊಡೆತ ಬೀಳಲಿದೆ. ಹೀಗಾಗಿ ಇಂತಹ ಸಮಸ್ಯೆಯನ್ನು ನಾವು ಒಗ್ಗಟ್ಟಿನಿಂದ ಎದುರಿಸುವುದು ಅಗತ್ಯವಾಗಿದೆ ಎಂದರು.

ಮಾಜಿ ಅಧ್ಯಕ್ಷ ಶಕೂರ್ ಹಾಜಿ ಮಾತನಾಡಿ, ಈ ವಿಚಾರವನ್ನು ಪ್ರತಿಯೊಬ್ಬ ವರ್ತಕನೂ ಗಂಭೀರವಾಗಿ ಪರಿಗಣಿಸಬೇಕಿದ್ದು, ಇದರಿಂದ ಕೃಷಿಕರಿಗೂ ತೊಂದರೆಯಾಗಲಿರುವುದರಿಂದ ಅವರ ಸಹಕಾರವೂ ಬೇಕಾಗುತ್ತದೆ. ನಾವು ಸಂಘಟಿತವಾಗಿದ್ದಾಗ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಲಾರಿಗಳನ್ನು ತಡೆದಿರುವುದರಿಂದ ಅಡಿಕೆ ವರ್ತಕರ ಜತೆಗೆ ಕ್ಯಾಂಪ್ಕೋ ಸಂಸ್ಥೆಗೂ ತೊಂದರೆಯಾಗಲಿದ್ದು, ವರ್ತಕರ ನಿಯೋಗ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸುವಂತೆ ಸದಸ್ಯರು ಸಲಹೆ ನೀಡಿದರು. ಜತೆಗೆ ವರ್ತಕರ ಜಿಲ್ಲಾ ಸಂಘದ ಜತೆ ಚರ್ಚಿಸಿಕೊಂಡು ಅವರು ಬಂದ್ ಮಾಡುವುದಾದರೆ ಜತೆಯಾಗಿ ಮಾಡೋಣ, ಇಲ್ಲದಿದ್ದರೆ ಜೂ. ೨೨, ೨೩ರಂದು ಕಾದು ೨೪ರಂದು ಬಂದ್ ಮಾಡುವ ಕುರಿತು ತೀರ್ಮಾನ ಕೈಗೊಳ್ಳೋಣ. ಶಾಸಕರು, ಸಂಸದರನ್ನು ಕೂಡ ಭೇಟಿ ಮಾಡಿ ಸಮಸ್ಯೆ ಹೇಳಿ ಪರಿಹಾರಕ್ಕೆ ಒತ್ತಾಯಿಸೋಣ ಎಂದು ವರ್ತಕ ಸದಸ್ಯರು ಸಲಹೆ ನೀಡಿದರು.

ಸಂಘದ ಗಂಗಾಧರ ಗೌಡ ಅವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎ. ಸಿದ್ದೀಕ್ ಕಾರ್ಯಕ್ರಮ ನಿರ್ವಹಿಸಿದರು.