ಸಾರಾಂಶ
ರಾಣಿಬೆನ್ನೂರು: ರೈತರ ಹೊಲಗಳಿಗೆ ತೆರಳುವ ರಸ್ತೆಗೆ ವ್ಯಕ್ತಿಯೊಬ್ಬ ತಡೆಯೊಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ತರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಬಂದ್ ಮಾಡಿದ ಘಟನೆ ಬುಧವಾರ ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 200- 300 ಎಕರೆ ಜಮೀನಿನಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಗ್ರಾಮದ ವ್ಯಕ್ತಿಯೊಬ್ಬ ತಮಗೆ ಸೇರಿದ್ದು ಎಂದು ಅದಕ್ಕೆ ಒಡ್ಡು ಕಟ್ಟಿ ಬಂದ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜೋಯಿಸರಹರಳಹಳ್ಳಿ- ಸುಣಕಲ್ಲಬಿದರಿ ರಸ್ತೆಯನ್ನು ಬಂದ್ ಮಾಡಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಬಂದು ಸಮಸ್ಯೆ ಇತ್ಯರ್ಥ ಮಾಡಬೇಕು. ಆ ಜಮೀನಿಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ನಮಗೆ ಹೊಸ ರಸ್ತೆಯನ್ನು ಹುಡುಕಿ ಕೊಡುವವರೆಗೂ ರಸ್ತೆ ತೆರವುಗೊಳಿಸುವುದಿಲ್ಲ ಎಂದರು.
ಕೋರ್ಟ್‌ಗೆ ಹೋಗಬೇಕು: ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಜಾಗೆಯು ಖಾಸಗಿ ವ್ಯಕ್ತಿಗೆ ಸೇರಿದ್ದಾಗಿದೆ. ನಕ್ಷೆಯಲ್ಲಿ ಆ ಭಾಗದಲ್ಲಿ ರಸ್ತೆ ಇರುವುದಿಲ್ಲ. ಈ ಕುರಿತು ಈಗಾಗಲೇ ರೆವಿನ್ಯೂ ಅಧಿಕಾರಿ ಹಾಗೂ ಸರ್ವೆ ಅಧಿಕಾರಿಗಳಿಗೆ ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಇತ್ಯರ್ಥಕ್ಕೆ ಸಭೆ ನಡೆಸಲು ತಿಳಿಸಲಾಗಿದೆ. ಒಂದು ವೇಳೆ ಗ್ರಾಮಸ್ಥರು ರಸ್ತೆ ಬೇಕಾದರೆ ಕೋರ್ಟ್‌ಗೆ ಹೋಗಿ ರಸ್ತೆ ಮಾಡಿಸಿಕೊಂಡು ಬರಬೇಕು ಎಂದು ರಾಣಿಬೆನ್ನೂರು ತಹಸೀಲ್ದಾರ್ ಆರ್.ಎಚ್. ಭಾಗವಾನ್ ತಿಳಿಸಿದರು.ಕೈದಿ ಆತ್ಮಹತ್ಯೆ ಪ್ರಕರಣ: ಮೂವರ ಅಮಾನತುಹಾವೇರಿ: ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಕರ್ತವ್ಯ ಲೋಪದಡಿ ಜೈಲಿನ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಕಾರಾಗೃಹದ ಮುಖ್ಯವೀಕ್ಷಕರಾದ ಕೆ.ಡಿ. ಮಾದರ, ಎಸ್. ಪ್ರಭು, ಅಂಬರೀಶ್ ಹಾವೇರಿ ಎಂಬವರನ್ನು ಕರ್ತವ್ಯ ಲೋಪದಡಿ ಬೆಳಗಾವಿ ಡಿಐಜಿ ಅಮಾನತುಗೊಳಿಸಿದ್ದಾರೆ ಎಂದು ಜಿಲ್ಲಾ ಕಾರಗೃಹದ ಅಧೀಕ್ಷಕಿ ವೈ.ಡಿ. ನಾಗರತ್ನ ತಿಳಿಸಿದ್ದಾರೆ.ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ ಕೋಟೆಪ್ಪ ಅಂಬಿಗೇರ (43) ಎಂಬ ಕೈದಿ ಜಿಲ್ಲಾ ಕಾರಾಗೃಹದ ಸ್ಟೋರ್ ರೂಂನಲ್ಲಿ ಮಾ. 2ರಂದು ನೇಣಿಗೆ ಶರಣಾಗಿದ್ದ.ಈತ ಸವಣೂರು ತಾಲೂಕು ಹತ್ತಿಮತ್ತೂರ ಗ್ರಾಮದಲ್ಲಿ 2018ರ ಜೂನ್ ತಿಂಗಳಲ್ಲಿ ಅನೈತಿಕ ಸಂಬಂಧದ ವಿಚಾರಕ್ಕೆ ಇಬ್ಬರನ್ನು ಬರ್ಬರವಾಗಿ ಕೊಲೆಗೈದು ಜೈಲು ಸೇರಿದ್ದ. ಈ ಪ್ರಕರಣ ಇನ್ನೂ ವಿಚಾರಣೆ ನಡೆದಿತ್ತು.
ಕಾರಾಗೃಹದ ಅಡುಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೋಟೆಪ್ಪ ಭಾನುವಾರ ಬೆಳಗ್ಗೆ ಸ್ಟೋರ್ ರೂಂನಲ್ಲಿ ಸಾಮಗ್ರಿ ತರಲೆಂದು ಹೋಗಿ ಅಲ್ಲಿಯೇ ನೇಣಿಗೆ ಶರಣಾಗಿದ್ದ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ನ್ಯಾಯಾಂಗ ತನಿಖೆ ನಡೆದಿತ್ತು. ಈಗ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.