ಸಾರಾಂಶ
ರಾಣಿಬೆನ್ನೂರು: ತಾಲೂಕಿನ ರೈತರಿಗೆ ಖಾಸಗಿ ವಿಮಾ ಕಂಪನಿಯವರು ಕೂಡಲೇ ಬೆಳೆವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ತಾಲೂಕಿನ ಹೆಡಿಯಾಲ ಬಳಿ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ಗ್ರಾಪಂ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಕಳೆದ ಬಾರಿ ಸರ್ಕಾರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದ ಮೇಲೆ ಬೆಳೆವಿಮೆ ಮಾಡಿಸಿದ ಎಲ್ಲ ರೈತರ ಖಾತೆಗೆ ವಿಮಾ ಕಂಪನಿಯವರು ಶೇ. 25ರಷ್ಟು ಪರಿಹಾರ ಹಾಕಿದ್ದರು. ಬಾಕಿಯಿರುವ ಶೇ. 75ರಷ್ಟು ಪರಿಹಾರ ಕೊಡುವುದಾಗಿ ತಿಳಿಸಿದ್ದರು. ಆದರೀಗ ವರ್ಷ ಕಳೆದರೂ ವಿಮಾ ಕಂಪನಿಯವರು ಹಣ ನೀಡದೆ ಮೋಸ ಮಾಡುತ್ತಿದ್ದಾರೆ. ಬೆಳೆವಿಮೆಯ ಬಾಕಿ ಹಣ ನೀಡುವಂತೆ ಕೇಳಿದರೆ, ಇಲ್ಲಸಲ್ಲದ ನೆಪಹೇಳಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವಿಮಾ ಕಂಪನಿಯವರಿಗೆ ಸೂಚಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ಜಿಲ್ಲಾಡಳಿತ ರೈತರ ಈ ಸಮಸ್ಯೆಯನ್ನು ತುರ್ತು ಇತ್ಯರ್ಥಪಡಿಸದಿದ್ದರೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಬಹಿಷ್ಕರಿಸಿ ಚುನಾವಣಾ ಕಾರ್ಯಕ್ಕೆ ಅಡೆತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ವೃತ್ತ ನಿರೀಕ್ಷಕ ಅಶೋಕ ಅರಳೇಶ್ವರ ಹಾಗೂ ಕೃಷಿ ಇಲಾಖೆ ಅಧಿಕಾರಿ ಅರವಿಂದ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸುರೇಶ ಮಡ್ಲೂರ, ಲಕ್ಷ್ಮಣ ಚೌಟಿ, ಸುರೇಶ ಚಪ್ಪರದಹಳ್ಳಿ, ಶಿವಕುಮಾರ ಜ್ಯೋತಿ, ಹೇಮಪ್ಪ ಮಾರೇರ, ಮಹೇಶಪ್ಪ ಮಾಸಣಗಿ, ಈರಪ್ಪ ಗಂಗಣ್ಣನವರ, ಬಸಪ್ಪ ಹೊಳಲವರ, ನಾಗಪ್ಪ ಅರಳಿ, ಬಸನಗೌಡ ಪಾಟೀಲ, ಮಹೇಶಪ್ಪ ಮಳಿಯಪ್ಪನವರ, ವಿರುಪಾಕ್ಷಪ್ಪ ಅರಳಿ, ಶಂಭು ಮಾಸಣಗಿ ಮತ್ತಿತರರು ಪಾಲ್ಗೊಂಡಿದ್ದರು.