ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಅನೀಮಿಯಾ ಪ್ರಕರಣಗಳ ಕಡಮೆಗೊಳಿಸಲು ಅನುಕೂಲವಾಗುವಂತೆ ಶೀಘ್ರದಲ್ಲಿಯೇ ಬ್ಲಡ್ ಬ್ಯಾಂಕ್ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ ಗುಂಡೂರಾವ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ರಕ್ತ ಸಂಗ್ರಹ ಘಟಕಗಳು ಇದ್ದು, ಮುಂಬರುವ 15 ದಿನಗಳಲ್ಲಿ ಬ್ಲಡ್ ಬ್ಯಾಂಕ್ ಆರಂಭಿಸುವ ಮೂಲಕ ಅನೀಮಿಯಾ ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಪತ್ತೆ ಹಚ್ಚಿ ಆದ್ಯತೆ ಮೇಲೆ ಪರಿಹರಿಸುವಂತೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲೇ ಲ್ಯಾಬ್ ಪರೀಕ್ಷೆ, ಔಷಧಿ: ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ರೋಗಿಗಳಿಗೆ ಔಷಧಿ ಹೊರಗಡೆಯಿಂದ ತರಲು ಕಳಿಸುವಂತಿಲ್ಲ. ಅದರಂತೆ ಲ್ಯಾಬ್ ಪರೀಕ್ಷೆಗೂ ಹೊರಗೆ ಕಳಿಸಬಾರದು. ಉಚಿತವಾಗಿ ಸಿಗುವ ಔಷಧಿಗಳನ್ನು ಆದ್ಯತೆ ಮೇಲೆ ಪೂರೈಸಲು ಸೂಚನೆ ನೀಡಿದರು.300 ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್‌ಗಳ ನೇಮಕ: ಜಿಲ್ಲೆಯಲ್ಲಿ ಲ್ಯಾಬ್ ಟೆಕ್ನಿಷಿಯನ್‌ಗಳ ಕೊರತೆ ಇರುವುದು ತಮ್ಮ ಗಮನಕ್ಕೆ ಬಂದಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಶೀಘ್ರದಲ್ಲಿಯೇ 300 ಫಾರ್ಮಾಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಶಿಯನ್‌ಗಳ ನೇಮಕಾತಿಯಾಗಲಿದೆ. ವಿವಿಧ ಜಿಲ್ಲೆಗಳಿಗೆ ಅವರನ್ನು ನೇಮಿಸಲಾಗುವುದು ಎಂದರು.
ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರನ್ನು ಪಡೆಯಲು ಆದೇಶಿಸಲಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು.ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ ಹಾಗೂ ಸಂಜೆ ಆರಂಭಿಸಿ: ನಮ್ಮ ಕ್ಲಿನಿಕ್‌ಗಳು ಬೆಳಗಿನ ಹಾಗೂ ಸಂಜೆ ಹೊತ್ತಿನಲ್ಲಿ ಆರಂಭಿಸಲು ಸೂಚಿಸಲಾಗಿದೆ. ಈ ಕುರಿತು ಉಪಯುಕ್ತತೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಇತ್ತೀಚೆಗೆ ಹೊನಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಶಿಶುವಿನ ಮರಣ ಕುರಿತು ವಿಚಾರಣೆ ಮಾಡಿ ವರದಿ ಸಲ್ಲಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಹಾಪೂರ ಆಸ್ಪತ್ರೆಗೆ ಎಮ್.ಆರ್.ಐ ಯಂತ್ರ ನಿರ್ವಹಣೆಗೆ ಶೀಘ್ರ ಓರ್ವ ಟೆಕ್ನೀಶಿನ್ ನೇಮಿಸಬೇಕು. ತೀವ್ರ ರಕ್ತಹೀನತೆ ಗರ್ಭಿಣಿಯರ ಚಿಕಿತ್ಸೆ ಹೆಚ್ಚಿಸಬೇಕು. ಮೊದಲ ತ್ರೈಮಾಸಿಕದಲ್ಲಿ ನೋಂದಾಯಿಸದೆ ಬಾಕಿ ಉಳಿದಿರುವ ಗರ್ಭಿಣಿಯರನ್ನು ಗುರುತಿಸಬೇಕು. ತಾಯಂದಿರ ಮರಣ ಪ್ರಮಾಣ ತಗ್ಗಿಸಲು ನಿಗಾ ವಹಿಸಬೇಕು. ವಿವಿಧ ಆಸ್ಪತ್ರೆಗಳ ಸ್ವಚ್ಛತೆ, ರೋಗಿಗಳ ತಪ್ಪಾಸಣೆ, ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಸುಧಾರಿಸಲು ಎಚ್ಚರ ವಹಿಸುವಂತೆ ಅವರು ಸೂಚನೆ ನೀಡಿದರು.ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಡಿ.ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಅಭಿಯಾನ ನಿರ್ದೇಶಕ ಡಾ.ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಡಾ.ಜಿ.ಎಸ್ ಪುಷ್ಪಲತಾ, ಉಪ ನಿರ್ದೇಶಕಿ ಡಾ. ಚಂದ್ರಿಕಾ ಜಿಲ್ಲಾಧಿಕಾರಿ ಡಾ.ಸುಶೀಲಾ, ಜಿಪಂ ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.