ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಜೀವ ರಕ್ಷಣೆಗೆ ಕಾರಣವಾಗುವ ರಕ್ತದಾನದಂತ ಮಹತ್ವದ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದು ಎಸಿಸಿ ಕಾರ್ಖಾನೆಯ ದಕ್ಷೀಣ ವಲಯ ಕ್ಲಸ್ಟರ್ ಮುಖ್ಯಸ್ಥ ಪರಾಗ್ ಶ್ರೀವಾಸ್ತವ್ ಹೇಳಿದರು.ತಾಲೂಕಿನ ವಾಡಿ ಪಟ್ಟಣದ ಎಸಿಸಿ ಕಾರ್ಖಾನೆಯ ಕ್ಲಬ್ ಹೌಸ್‌ನಲ್ಲಿ ಆಯೊಜಿಸಿದ್ದ ಕಾರ್ಮಿಕರ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಅದಾನಿ ಒಡೆತನ ಬಂದ ಮೇಲೆ ಎಸಿಸಿ ಕಾರ್ಖಾನೆಯು ಇಂತಹ ಹತ್ತಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇದು ವರ್ಷದಲ್ಲಿ ಎರಡನೆಯ ರಕ್ತದಾನ ಶಿಬಿರವಾಗಿದೆ ಎಂದರು.
ಮನುಷ್ಯನ ಜೀವವನ್ನು ಮನುಷ್ಯನೇ ರಕ್ತದಾನ ಮಾಡುವುದರ ಮೂಲಕ ಮಾತ್ರ ಉಳಿಸಬಹುದಾಗಿದ್ದು ಹೀಗಾಗಿ ಪ್ರತಿಯೊಬ್ಬರೂ ಇಂತಹ ಸಾಮಾಜಿಕ ಜವಾಬ್ದಾರಿ ಕಾರ್ಯಕ್ಕೆ ಕೈಜೊಡಿಸಬೇಕು. ಅನೇಕರಿಗೆ ರಕ್ತದಾನ ಮಾಡಲು ಆಸಕ್ತಿ ಇಲ್ಲ. ಲಕ್ಷಾಂತ ಮಂದಿ ರಕ್ತಸ್ರಾವದಿಂದಾಗಿ ಜೀವ ಉಳಿಸಿಕೊಳ್ಳಲು ಜೀವನ್ಮರಣ ಹೊರಾಟ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ಮನವಿ ಮಾಡಿದರು.ಕಲಬುರಗಿಯ ಜೀಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮುಖ್ಯಸ್ಥೆ ಡಾ. ಮಮತಾ ಪಾಟೀಲ್ ಮಾತನಾಡಿ, ರಕ್ತದಾನದಿಂದ ಆರೊಗ್ಯ ಸುಧಾರಿಸುತ್ತದೆ. ದೇಹದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ರಕ್ತ ವಿಭಜಿಸಿ ಯಾವ ಅಂಶದ ಕೊರತೆ ಇದೆಯೋ ಅದನ್ನು ಮಾತ್ರ ರೋಗಿಗೆ ನೀಡುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇದರಿಂದ ರಕ್ತದ ಅಭಾವಕ್ಕೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗುತ್ತಿದೆ. ಮಹಿಳೆಯರಲ್ಲಿ ಶೇ.೮೦ರಷ್ಟು ಜನರಿಗೆ ರಕ್ತಹೀನತೆ ಸಮಸ್ಯೆ ಕಾಡುತ್ತಿದೆ. ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ಆದರೆ ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳ ಸಂಖ್ಯೆ ಹೆಚ್ಚಿಸಬೇಕು ಎಂದರು.
ಮಾನವ ಸಂಪನ್ಮೂಲ ವಿಭಾಗದ ದಕ್ಷಿಣ ವಲಯ ಮುಖ್ಯ ವ್ಯವಸ್ಥಾಪಕ ಪವನ್ ಗಾಂಧಿ ಕ್ಲಸ್ಟರ್ ವಿಭಾಗದ ಮುಖ್ಯಸ್ಥ ಯಡ್ಡು ಕೊಟೇಶ್ವರರಾವ, ರಮೇಶ ಉದುಪಡಿ, ಸಂತೊಷ ಕುಲ್ಕರ್ಣಿ, ಮಧುಸೂಧನ ಕುಲಕರ್ಣಿ, ವೀರೇಶ ಎಂ. ರಮೇಶ ಕಾರಬಾರಿ, ತುಕಾರಾಂ ರಾಠೋಡ, ಅನಿತಾ ಮಲಗೊಂಡ ಇತರರು ಇದ್ದರು. ಸುರಕ್ಷತಾ ಅಧಿಕಾರಿ ಎಂ.ಡಿ ಸಲ್ಲಾವುದ್ದಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.