ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

| Published : Nov 11 2025, 03:00 AM IST

ಸಾರಾಂಶ

ಮಡಿಕೇರಿ ರಕ್ತನಿಧಿ ಕೇಂದ್ರ, ತಥಾಸ್ತು ಸಾತ್ವಿಕ ಸಂಸ್ಥೆ, ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಹಾಗೂ ಮೈಸೂರಿನ ಅಬಕಾರಿ ನಿರೀಕ್ಷಕರ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮಡಿಕೇರಿ ರಕ್ತನಿಧಿ ಕೇಂದ್ರ, ತಥಾಸ್ತು ಸಾತ್ವಿಕ ಸಂಸ್ಥೆ, ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಹಾಗೂ ಮೈಸೂರಿನ ಅಬಕಾರಿ ನಿರೀಕ್ಷಕರ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ನಡೆಯಿತು.ಶಿಬಿರದಲ್ಲಿ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಕೆಲವರಲ್ಲಿ ರಕ್ತದಾನದ ಬಗ್ಗೆ ಹೆದರಿಕೆಯಿದ್ದು, ರಕ್ತದಾನಕ್ಕೆ ಮುಂದಾಗುತ್ತಿಲ್ಲ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದಾನಿಗಳಿಗೂ ಹೆಚ್ಚಿನ ಪ್ರಯೋಜನವಿದ್ದು, ರಕ್ತದೊತ್ತಡ ನಿಯಂತ್ರಿಸುವುದರೊಂದಿಗೆ, ನಮ್ಮ ರಕ್ತದಲ್ಲಿರುವ ಸಮಸ್ಯೆಗಳನ್ನು ಕಂಡುಕೊಳ್ಳಬಹುದು. ದಾನಿಯಿಂದ ಪಡೆದ ರಕ್ತ ನಾಲ್ಕು ಜನರಿಗೆ ಉಪಯೋಗಕ್ಕೆ ಬರಲಿದ್ದು, ಯುವಜನರು ಯಾವುದೇ ಅಂಜಿಕೆ ಇಲ್ಲದೆ ರಕ್ತದಾನದಲ್ಲಿ ಪಾಲ್ಗೊಳ್ಳಬಹುದು ಎಂದರು.ರಕ್ತ ಪಡೆಯುವಾಗಲು ಕೆಲವೊಂದು ನಿಯಮಗಳಿದ್ದು, ಆರೋಗ್ಯವಂತ, ೧೮ ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಬಹುದು. ದಾನಿಗಳು ರಕ್ತ ನೀಡುವ ಮುನ್ನ ಚೆನ್ನಾಗಿ ನಿದ್ರೆ ಮಾಡಿರಬೇಕು. ಸರಿಯಾದ ಆಹಾರ ಮತ್ತು ನೀರನ್ನು ಕುಡಿದಿರಬೇಕು. ಯಾವುದೇ ಕಾಯಿಲೆಯಿಂದ ಬಳಲುತ್ತಿರಬಾರದು ಮತ್ತು ಔಷಧಿ ಪಡೆಯುತ್ತಿರಬಾರದು. ರಕ್ತದಾನದ ನಂತರ ದ್ರವ ಆಹಾರ ಹೆಚ್ಚು ಬಳಸಬೇಕು. ಬಿಸಿಲಿನಲ್ಲಿ ಆಟವಾಡಬಾರದೆಂದು ತಿಳಿಸಿದರು.ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಜಮೀರ್ ಆಹಮ್ಮದ್ ಮಾತನಾಡಿ, ತಾಲೂಕು ಕೇಂದ್ರ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಇಬ್ಬರು ಸ್ತ್ರೀ ರೋಗ ತಜ್ಞರು ಹಾಗೂ ಅನಸ್ತೇಶಿಯ ವೈದ್ಯರನ್ನು ಸರ್ಕಾರ ನೇಮಕ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಸುಮಾರು ೧೦೦ ಮಂದಿಗೆ ಹೆರಿಗೆ ಮಾಡಿಸುವ ಯೋಜನೆಯಿದ್ದು, ಅಂತಹ ಸಂದರ್ಭಗಳಲ್ಲಿ ನಮಗೂ ರಕ್ತದ ಕೊರತೆ ಕಾಡಬಹುದು. ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಯೋಜಿಸುವ ರಕ್ತದಾನ ಶಿಬಿರಗಳಿಂದ ರಕ್ತದ ಕೊರತೆಯನ್ನು ನೀಗಲು ಸಹಕಾರಿಯಾಗಲಿದೆ ಎಂದರು.

ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಹರ್ಷ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಹೆದರಿಕೆ ಬೇಡ. ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ತೃಪ್ತಿ ನಮಗೆ ಸಿಗಲಿದೆ ಎಂದು ತಿಳಿಸಿದರು.ಶಿಬಿರದ ಅಧ್ಯಕ್ಷತೆಯನ್ನು ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ಉದಯ್ ಮಾಳವ ವಹಿಸಿದ್ದರು. ಇದೇ ಸಂದರ್ಭ ಮೈಸೂರಿನ ಅಬಕಾರಿ ಇಲಾಖೆಗೆ ವರ್ಗಾವಣೆಗೊಂಡ ಅಬಕಾರಿ ನಿರೀಕ್ಷಕ ಲೋಕೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.