ಉಪ್ಪಿನಂಗಡಿ ಆಟೋ ಚಾಲಕ, ಮಾಲಕರ ಸಂಘದಿಂದ ರಕ್ತದಾನ ಶಿಬಿರ

| Published : Jan 07 2025, 12:31 AM IST

ಸಾರಾಂಶ

ಉಪ್ಪಿನಂಗಡಿಯ ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘದ ಆಶ್ರಯದಲ್ಲಿ ಭಾನುವಾರ ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಸಭಾಂಗಣದಲ್ಲಿ ಸಾಮಾಜಿಕ ಕಾರ್ಯಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಅಸಂಘಟಿತರಾಗಿದ್ದ ಆಟೋ ಚಾಲಕರು ಪ್ರಸಕ್ತ ಸಂಘಟಿತಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹವಾಗಿದೆ. ಆಟೋ ಚಾಲಕರಿಗೆ ಜೀವನ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಸವಲತ್ತುಗಳನ್ನು ಆಟೋ ಚಾಲಕರಿಗೆ ತಲುಪಿಸುವಲ್ಲಿ ಗಮನ ಹರಿಸಲಾಗುವುದೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಅವರು ಉಪ್ಪಿನಂಗಡಿಯ ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘದ ಆಶ್ರಯದಲ್ಲಿ ಭಾನುವಾರ ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಸಭಾಂಗಣದಲ್ಲಿ ಜರುಗಿದ ಸಾಮಾಜಿಕ ಕಾರ್ಯಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮತ್ತು ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಶಾಸಕ ಸಂಜೀವ ಮಠದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಊರಿನ ಜನತೆಗೆ ರಕ್ತಸಂಬಂಧವನ್ನು ಮೀರಿ ಬಂಧುತ್ವವನ್ನು ಹೊಂದಿರುವ ಆಟೋ ಚಾಲಕರು ಸಂಘಟಿತರಾಗಿ ಸಮಾಜಮುಖಿಗಳಾಗಿ ಸಮಾಜದಲ್ಲಿ ಗೌರವದ ಸ್ಥಾನಕ್ಕೇರಿರುವುದು ಅಭಿನಂದನಾರ್ಹ ಎಂದರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಆಟೋ ಚಾಲಕರ ಮಕ್ಕಳ ಪೈಕಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ, ಪೌರ ಕಾರ್ಮಿಕರಿಗೆ ಗೌರವಾರ್ಪಣೆ, ಅಂಗವಿಕಲರಿಗೆ ಸಾಧನಗಳ ವಿತರಣೆ, ರಕ್ತದಾನದಂತಹ ಕಾರ್ಯಕ್ರಮಗಳು ನಡೆದವು. ಆಟೋ ಚಾಲಕರ ಬೇಡಿಕೆಗಳಿಗೆ ಸ್ಪಂದಿಸಿ ತನ್ನ ಶಾಸಕತ್ವದ ಅವಧಿಯಲ್ಲಿ ಹಲವಾರು ಅನುದಾನವನ್ನು ಒದಗಿಸಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ನೇತ್ರಾವತಿ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಫಾರೂಕ್ ಜಿಂದಗಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಡಾ. ರಾಜಾರಾಮ ಕೆ.ಬಿ., ಡಾ. ನಿರಂಜನ್ ರೈ, ಮಹಮ್ಮದ್ ತೌಷಿಫ್, ಚಲನಚಿತ್ರ ನಟ ಎಂ.ಕೆ. ಮಠ, ವಿನ್ಸೆಂಟ್ ಫರ್ನಾಂಡಿಸ್‌, ಸದಾನಂದ ಶೆಟ್ಟಿ, ವಿಜಯ ಕುಮಾರ್ ಕಲ್ಲಳಿಕೆ, ಝಕಾರಿಯಾ ಕೊಡಿಪ್ಪಾಡಿ, ಅಶೋಕ್ ಬಂಡಾಡಿ, ಕಲಂದರ್ ಶಾಫಿ, ಅಣ್ಣಿ ಗೌಡ ಮಲ್ಲಕಲ್ಲು, ಹರೀಶ್ಚಂದ್ರ, ಸೇಸಪ್ಪ ನೆಕ್ಕಿಲು, ಅನ್ಸಾರ್ ಮಠ, ಅಬ್ದುಲ್ ರಹಿಮಾನ್ ಯೂನಿಕ್, ಕೈಲಾರ್ ರಾಜಗೋಪಾಲ ಭಟ್, ವಂದನಾ ಶರತ್, ಅಬ್ದುಲ್ ಮಜೀದ್, ಲೋಕೇಶ್ ಬೆತ್ತೋಡಿ ಮೊದಲಾದವರು ಉಪಸ್ಥಿತರಿದ್ದರು.