ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಕ್ತದಾನ ತುರ್ತು ಸಂದರ್ಭದಲ್ಲಿ ಅನೇಕರ ಜೀವ ಉಳಿಸಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ತಾಲೂಕಿನ ಕೆ.ಶೆಟ್ಟಹಳ್ಳಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ರಕ್ತದಾನ ಮಹತ್ವ ಕುರಿತು ಉಪನ್ಯಾಸ ನೀಡಿದರು.
ರಕ್ತದಾನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯುತ ಕರ್ತವ್ಯ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ.ಮನುಷ್ಯ ಮನುಷ್ಯರಿಗೆ ಮಾತ್ರ ರಕ್ತದಾನ ಮಾಡಲು ಸಾಧ್ಯ. ರಕ್ತದಾನದಂತಹ ಮಹತ್ಕಾರ್ಯಕ್ಕೆ ಮುಂದಾಗುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವಂತೆ ಕರೆ ನೀಡಿದರು.ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು. ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿಯರಿಗೆ, ಅಪಘಾತವಾಗಿ ತೀವ್ರ ರಕ್ತ ಸ್ರಾವವಾದಾಗ, ಕ್ಯಾನ್ಸರ್, ಡೆಂಘೀ ಜ್ವರದಿಂದ ಬಳಲುತ್ತಿರುವ ರೋಗಿಗೆ, ವೈರಲ್ ಫೀವರ್ ಹಾಗೂ ರಕ್ತ ಹೀನತೆ ಮಾಡುವಂತಹ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಇದೆ ಎಂದು ಹೇಳಿದರು.
ರಕ್ತ ಕೊಡುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು, ದೇಹದ ಸೌಂದರ್ಯ ಕೂಡ ಚೆನ್ನಾಗಿರುತ್ತದೆ. ಕ್ಯಾನ್ಸರ್, ಹೃದಯಘಾತ, ಅಧಿಕ ರಕ್ತದೊತ್ತಡ ಆಗುವುದನ್ನು ತಡೆಗಟ್ಟುವ ಜೊತೆಗೆ ಲೀವರ್ ಹಾಗೂ ಹೃದಯ ಆರೋಗ್ಯವಾಗಿರುತ್ತದೆ. ಹೀಗಾಗಿ 18 ವರ್ಷ ಮೇಲ್ಪಟ್ಟ ಆರೋಗ್ಯವಂತರು ರಕ್ತದಾನ ಮಾಡುವ ಸಂಕಲ್ಪ ಮಾಡಬೇಕೆಂದು ತಿಳಿಸಿದರು.ಇತಿಹಾಸ ಪ್ರಾಧ್ಯಾಪಕಿ ಡಾ.ಎ.ಸಿ.ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಬಡ್ಡಿ ಆಟಗಾರ ನಂದೀಶ್ ಕುಮಾರ್, ರಾಸೇ ಯೋಜನೆ ಶಿಬಿರಾಧಿಕಾರಿ ಮೂರ್ತಿ , ಸಹ ಪ್ರಾಧ್ಯಾಪಕರಾದ ವಿನಯ, ಸಿಬ್ಬಂದಿಗಳಾದ ಮಹಮ್ಮದ್ ನಿಸಾರ್, ಶಿವಪ್ರಸಾದ್, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ ಪಣಿಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಮತಾ, ಆಶಾ ಕಾರ್ಯಕರ್ತೆ ಸುಧಾಮಣಿ, ಗೌರಮ್ಮ ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))