ರಕ್ತದಾನದಿಂದ ಸಾವಿರಾರು ಜೀವ ಉಳಿಸಲು ಸಾಧ್ಯ

| Published : Jun 29 2024, 12:43 AM IST

ರಕ್ತದಾನದಿಂದ ಸಾವಿರಾರು ಜೀವ ಉಳಿಸಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ಹಾಗೂ ಆರೋಗ್ಯವಂತ ವ್ಯಕ್ತಿಗಳು ನಿಯಮಿತ ರಕ್ತದಾನ ಮಾಡುವುದರಿಂದ ಶೇ.80 ಹೃದಯಾಘಾತ ಅಪಾಯದಿಂದ ಮುಕ್ತಿ ಹೊಂದಲು ಸಾಧ್ಯವಿದೆ.

ಹೂವಿನಹಡಗಲಿ: ಜನರ ಜೀವ ಉಳಿಸಲು ರಕ್ತದಾನ ಬಹಳ ಮುಖ್ಯ. ಇದೊಂದು ಶ್ರೇಷ್ಠ ಮಾನವೀಯ ಕಾರ್ಯವಾಗಿದೆ. ಯುವ ಜನತೆ ಇಂತಹ ಸಮಾಜಮುಖಿ ಕೆಲಸಕ್ಕೆ ಮುಂದಾಗಬೇಕೆಂದು ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಪಿ.ವಿಜಯಕುಮಾರ್ ಅಭಿಮಾನಿ ಬಳಗ, ಹಗರಿಬೊಮ್ಮನಹಳ್ಳಿಯ ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ನೀಡುವ ಯುವಕರಿಗೆ ಯಾವುದೇ ಅಪಾಯ ತೊಂದರೆ ಉಂಟಾಗುವುದಿಲ್ಲ. ಬದಲಾಗಿ ಆರೋಗ್ಯದಲ್ಲಿ ಮತ್ತಷ್ಟು ಸುಧಾರಣೆಯಾಗುತ್ತದೆ. ಈ ಕುರಿತು ತಪ್ಪು ತಿಳಿವಳಿಕೆಯಿಂದ ಹೊರ ಬಂದು ರಕ್ತದಾನ ಮಾಡಬೇಕಿದೆ. ಈ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್ ಮಾತನಾಡಿ, ಪಿ.ಟಿ. ಪರಮೇಶ್ವರ ನಾಯ್ಕ ನೇತೃತ್ವದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಲು ಮುಂದಾಗಿದ್ದೇವೆ. ಯುವಕರು ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ಮಾತನಾಡಿ, ಯುವಕರು ಹಾಗೂ ಆರೋಗ್ಯವಂತ ವ್ಯಕ್ತಿಗಳು ನಿಯಮಿತ ರಕ್ತದಾನ ಮಾಡುವುದರಿಂದ ಶೇ.80 ಹೃದಯಾಘಾತ ಅಪಾಯದಿಂದ ಮುಕ್ತಿ ಹೊಂದಲು ಸಾಧ್ಯವಿದೆ. ರಕ್ತದ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ದೇಹದಿಂದ ಹೊರ ಹೋಗುವುದರಿಂದ ಕ್ಯಾನ್ಸರ್, ಕರುಳಿನ ರೋಗಗಳು ಬರುವುದಿಲ್ಲ. ಭಾರತದಲ್ಲಿ ಪ್ರತಿ ವರ್ಷ 1.2 ಮಿಲಿಯನ್ ಲೀಟರ್ ರಕ್ತದ ಬೇಡಿಕೆ ಇದೆ. ಆದರೆ, ದಾನಿಗಳಿಂದ 60 ಮಿಲಿಯನ್ ಲೀ. ಮಾತ್ರ ಸಂಗ್ರಹವಾಗುತ್ತದೆ. ಆರೋಗ್ಯವಂತರೆಲ್ಲರೂ ರಕ್ತದಾನಕ್ಕೆ ಮುಂದಾಗಬೇಕೆಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಸ್ವಪ್ನಾ ಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಮುಖಂಡರಾದ ಅರವಳ್ಳಿ ವೀರಣ್ಣ, ಸೋಗಿ ಹಾಲೇಶ, ಎಸ್.ದೂದನಾಯ್ಕ, ಎ.ಮುದಿಮಲ್ಲಪ್ಪ, ಬಸಣ್ಣ, ಜಿ. ವಸಂತ, ಕೆ.ಎಸ್. ಶಾಂತನಗೌಡ, ಎಲ್.ಚಂದ್ರನಾಯ್ಕ, ಪುರಸಭೆ ಸದಸ್ಯರಾದ ಸೊಪ್ಪಿನ ಮಂಜುನಾಥ, ಎಸ್.ತಿಮ್ಮಣ್ಣ, ಯು.ಹನುಮಂತಪ್ಪ, ಈಟಿ ಮಾಲತೇಶ, ಹನುಮಂತು ಇದ್ದರು.

ರಕ್ತದಾನ ಶಿಬಿರದಲ್ಲಿ 40 ಜನರು ರಕ್ತದಾನ ಮಾಡಿದರು.