ಸಾರಾಂಶ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ವ್ಯಕ್ತಿಗೆ ರಕ್ತ ನೀಡಿದಾಗ ಒಂದು ಅಮೂಲ್ಯ ಜೀವ ಉಳಿಸಿದಂತಾಗುತ್ತದೆ. ಹೀಗಾಗಿ ರಕ್ತದಾನ ಶ್ರೇಷ್ಟವಾದ ದಾನವಾಗಿದೆ ಎಂದು ಸ್ಥಳೀಯ ಪಿಎಸ್‌ಐ ಬೀಬಿ ಮರೇಮ್ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿ.ಎಂ.ಎಂ.ಇಸ್ಪಾತ್ ಸಂಸ್ಥೆ ,ಜೆ.ಎಸ್.ಡಬ್ಲೂ ಫೌಂಡೇಶನ್ ಮತ್ತು ಪ್ರಣತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ಯಾವುದೇ ಒಬ್ಬ ವ್ಯಕ್ತಿ ಹೆಚ್ಚಿನ ಮಟ್ಟದಲ್ಲಿ ರಕ್ತ ಕಳೆದುಕೊಂಡಾಗ ಅಥವಾ ಯಾವುದಾದರೂ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾದಾಗ, ರಕ್ತದೊರೆಯದೇ ಇದ್ದಾಗ ಸಾವು ಸಹ ಸಂಭವಿಸಬಹುದು. ಹಾಗಾಗಿ ತುರ್ತು ಸಂದರ್ಭಗಳಲ್ಲಿ ರಕ್ತ ದಾನ ಮಾಡುವುದರಿಂದ ಒಬ್ಬ ವ್ಯಕ್ತಿಯ ಜೀವ ಉಳಿಯುತ್ತದೆ. ರಕ್ತದಾನ ನೀಡಿ ಒಂದು ಅಮೂಲ್ಯ ಜೀವ ಉಳಿಸಿದ ಕೀರ್ತಿ ನಮ್ಮದಾಗುತ್ತದೆ ಎಂದು ಅವರು ಹೇಳಿದರು.
ಬಿ.ಎಂ.ಎಂ.ಸಂಸ್ಥೆಯ ಮಹಿಳಾ ವೈದ್ಯಾಧಿಕಾರಿ ಡಾ. ಅನುಷಾ ಮಾತನಾಡಿ, ಒಬ್ಬ ವ್ಯಕ್ತಿ ಸ್ವಇಚ್ಚೆಯಿಂದಲೇ ರಕ್ತದಾನಕ್ಕೆ ಮುಂದಾದಾಗ ಮಾತ್ರ ರಕ್ತದಾನಕ್ಕೆ ಮಹತ್ವ ಬರುತ್ತದೆ. ರಕ್ತದಾನದ ಬಗ್ಗೆ ವಿಶೇಷವಾಗಿ ಗ್ರಾಮೀಣ ಮಹಿಳೆಯರಲ್ಲಿ ತಪ್ಪು ತಿಳುವಳಿಕೆ ಇದೆ. ಇದು ಬದಲಾಗಬೇಕು. ಯಾವುದೇ ಒಬ್ಬ ಆರೋಗ್ಯವಂತ ಮಹಿಳೆ ರಕ್ತದಾನ ಮಾಡಬಹುದು. ಆದರೆ ರಕ್ತದಾನ ಮಾಡುವ ವ್ಯಕ್ತಿ ಆರು ತಿಂಗಳ ಮುಂಚೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಾರದು ಎಂದರು.ರಕ್ತ ನೀಡುವ ವ್ಯಕ್ತಿ ಮಧ್ಯ ಅಥವಾ ಮಾದಕ ವ್ಯಸನಿಯಾಗಿರಬಾರದು. ಮಹಿಳೆಯರಲ್ಲಿ ಆರು ತಿಂಗಳ ಒಳಗಾಗಿ ಹೆರಿಗೆ ಅಥವಾ ಗರ್ಭಸ್ರಾವವಾಗಿದ್ದರೆ ಅಥವಾ ಋತು ಸ್ರಾವದ ದಿನಗಳಾಗಿರಬಾರದು. ಇದಲ್ಲದೇ ಮೂತ್ರಪಿಂಡ, ಮಧುಮೇಹ, ಅಧಿಕ ರಕ್ತದೊತ್ತಡ, ಅಥವಾ ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇರಬಾರದು ಎಂದ ಅವರು, ರಕ್ತದಾನ ನೀಡುವ ಮುಂಚೆ ಅವರ ಆರೋಗ್ಯ ತಪಾಸಣೆ ಮಾಡಿದ ಬಳಿಕವೇ ರಕ್ತದಾನ ಪಡೆಯಲಾಗುತ್ತದೆ ಎಂದರು.
ರಸ್ತೆ ಅಪಘಾತ, ಹೆರಿಗೆ ಸಂದರ್ಭ, ತೀರಾ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದ್ದು, ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ಸ್ಥಿತಿ ಸುಧಾರಿಸುವುದಲ್ಲದೇ ರಕ್ತದಾನ ಪಡೆದ ವ್ಯಕ್ತಿಯ ಜೀವವೂ ಉಳಿಯುತ್ತದೆ ಎಂದ ಅವರು, ರಕ್ತದಾನ ಮಾಡಿದ ವ್ಯಕ್ತಿಯಲ್ಲಿ ಹೊಸ ರಕ್ತ ಉತ್ಪತ್ತಿ, ಕಾರ್ಯತತ್ಪರತೆ ಜೊತೆ ಕೊಲೆಸ್ಟ್ರಾಲ್ ಪ್ರಮಾಣವೂ ತಗ್ಗುತ್ತದೆ ಎಂದರು.ಬಿ.ಎಂ.ಎಂ.ಸಂಸ್ಥೆ ಮತ್ತು ಜೆ.ಎಸ್.ಡಬ್ಲೂ ಫೌಡೇಶನ್ ಅಧಿಕಾರಿಗಳಾದ ಚಂದ್ರಶೇಖರ್, ಅರುಣ್ ಕುಮಾರ್ ಎಂ. ರಾಹುಲ್, ಆರೋಗ್ಯ ಇಲಾಖೆಯ ಡಾ. ಭರತ್, ರೇಣುಕ, ಪಟ್ಟಣ ಪಂಚಾಯಿತಿ ಸದಸ್ಯೆ ಅಶ್ವಿನಿ ನಾಗರಾಜ, ಪ್ರಣತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಗಂಗಮ್ಮ ಮತ್ತು ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜೆ.ಎಸ್.ಡಬ್ಲೂ ಫೌಂಡೇಶನ್‌ನ ಅಧಿಕಾರಿ ರೆಹೆಮಾನ್ ಬಿ. ಪಾಗದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಜಿ.ನಾಗಲಾಪುರ ಮತ್ತು ಮರಿಯಮ್ಮನ ಹಳ್ಳಿ ಹೊಲಿಗೆ ತರಬೇತಿ ಕೇಂದ್ರ ಮಹಿಳೆಯರು, ಸೋಪು ಮತು ಫಿನಾಯಲ್ ತರಬೇತಿ ಕೇಂದ್ರದ ಮಹಿಳೆಯರು ಸೇರಿದಂತೆ ಸುತ್ತಮುತ್ತಲಿನ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಅಪಾರ ಸಂಖೆಯಲ್ಲಿ ಪಾಲ್ಗೊಂಡಿದ್ದರು.