ರಕ್ತದಾನದಿಂದ ಆರೋಗ್ಯ ವೃದ್ಧಿ, ಚೈತನ್ಯ ಹೆಚ್ಚಳ: ಪ್ರಶಾಂತ್

| Published : Jun 25 2025, 01:18 AM IST

ಸಾರಾಂಶ

ಅಪಘಾತ, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಜೀವ ಉಳಿಸಲು ರಕ್ತ ಅವಶ್ಯಕವಾಗಿದ್ದು, ಆರೋಗ್ಯವಂತರು ತಪ್ಪದೇ ರಕ್ತದಾನ ಮಾಡಬೇಕು.

ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಡಿಸಿ, ಎಸ್ಪಿ

ಕನ್ನಡಪ್ರಭವಾರ್ತೆ ಬಳ್ಳಾರಿ

ಅಪಘಾತ, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಜೀವ ಉಳಿಸಲು ರಕ್ತ ಅವಶ್ಯಕವಾಗಿದ್ದು, ಆರೋಗ್ಯವಂತರು ತಪ್ಪದೇ ರಕ್ತದಾನ ಮಾಡಿ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಸಹಯೋಗ ಮತ್ತು ಮಿನೇರಾ ಸ್ಟೀಲ್ ಇವರ ಸಹಕಾರದಲ್ಲಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬೃಹತ್ ರಕ್ತದಾನ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಕ್ತದಾನ ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳಿದ್ದು, ಅದರಲ್ಲಿ ಹೊಸ ರಕ್ತದ ಉತ್ಪತ್ತಿ ಆಗುವುದರ ಜೊತೆಗೆ ರಕ್ತ ಚಲನೆಯ ಕಾರ್ಯತತ್ಪರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದರು.

ಈ ಹಿಂದೆ ಜೆಎಸ್‌ಡಬ್ಲ್ಯುನಲ್ಲಿ 5000 ಯುನಿಟ್ ರಕ್ತ ಶೇಖರಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲೆಯಾಗಿದೆ. ಮುಂಬರುವ ದಿನಗಳಲ್ಲಿಯೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಮಾತನಾಡಿ, ರಕ್ತದಾನವು ಒಂದು ಮಹಾದಾನ. ರಕ್ತದಾನ ಶಿಬಿರಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೋಬ್ಬರ ಆರೋಗ್ಯವನ್ನೂ ಸಹ ಉಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ 2024-25 ರ ಸಾಲಿನಲ್ಲಿ 18,000 ಯುನಿಟ್ ಶೇಖರಿಸುವ ಮೂಲಕ ಮಾದರಿ ಜಿಲ್ಲೆಯಾಗಿದೆ. ಬೇರೆ ಜಿಲ್ಲೆಗಳಿಗೂ ಸಹ ರಕ್ತ ರವಾನಿಸಲಾಗುತ್ತಿದೆ. ಈ ಶಿಬಿರದಲ್ಲಿ 1500 ಯುನಿಟ್ ರಕ್ತ ಸಂಗ್ರಹಣೆ ಗುರಿ ಹೊಂದಲಾಗಿದೆ.

ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರೀ ಯರಿಗೆ, ಶಸ್ತ್ರಚಿಕಿತ್ಸಾ ಹೆರಿಗೆ ವೇಳೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಜೀವ ಉಳಿಸಲು ರಕ್ತ ಸಹಕಾರಿ ಆಗುತ್ತದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಜೀವ ಉಳಿಸುವ ಪುಣ್ಯದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ವಿ.ಜೆ. ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಬಳಿಕ ಪ್ರಮಾಣ ಪತ್ರ ನೀಡಲಾಯಿತು.

ಈ ವೇಳೆ ಜಿಲ್ಲೆಯಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ಆಶಾ ಕಾರ್ಯಕರ್ತೆ ಪರಿಮಳ, ವಂಶಿ ಕಲ್ಯಾಣಿ ರೆಡ್ಡಿ, ಮಂಜುನಾಥ, ಲೋಕೇಶ್ ಅವರಿಗೆ ಸನ್ಮಾನ ಮಾಡಲಾಯಿತು.

ಬಿಎಂಸಿಆರ್‌ಸಿ ನಿರ್ದೇಶಕ ಟಿ.ಗಂಗಾಧರ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ಮಿನೇರಾ ಸ್ಟೀಲ್ಸ್ ಪ್ರೈ.ಲಿಮಿಟೆಡ್‌ನ ನಿರ್ದೇಶಕ ಟಿ.ಹನುಮಂತ ರೆಡ್ಡಿ, ಉಪಾಧ್ಯಕ್ಷ ಗಿರೀಶ್ ಕುಮಾರ್, ವರುಣ್ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆಸೀಫ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ತಾರಾನಾಥ ವೈದ್ಯಕೀಯ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.