ಸಾರಾಂಶ
ರಕ್ತದಾನವು ಒಂದು ಶ್ರೇಷ್ಠ ಪವಿತ್ರ ಕಾರ್ಯವಾಗಿದ್ದು, ಈ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ಎಲ್ಲರೂ ಭಾಗಿಯಾಗೋಣ.
ಕನ್ನಡಪ್ರಭ ವಾರ್ತೆ ಕೊಪ್ಪಳ
ರಕ್ತದಾನವು ಒಂದು ಶ್ರೇಷ್ಠ ಪವಿತ್ರ ಕಾರ್ಯವಾಗಿದ್ದು, ಈ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ಎಲ್ಲರೂ ಭಾಗಿಯಾಗೋಣ ಎಂದು ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನೇಕ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ಸಿಗದೇ ಬಹಳಷ್ಟು ಜನ ಮರಣವನ್ನು ಹೊಂದುತ್ತಾರೆ. ಅವರಿಗೆ ಜೀವದಾನವನ್ನು ಮಾಡಲು ರಕ್ತದಾನವು ಅತ್ಯಂತ ಮಹತ್ವದ ಪವಿತ್ರ ಕಾರ್ಯವಾಗಿದೆ ಎನ್ನುವ ಮೂಲಕ ತಾವೇ ಸ್ವತಃ ರಕ್ತದಾನ ಮಾಡುವುದರ ಮೂಲಕ ಮಾದರಿಯಾದರು.
ಈ ಸಂದರ್ಭ ಹೂವಿನಹಡಗಲಿ ಗವಿಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಡಾ. ಮಹಾಂತೇಶ ಸಾಲಿಮಠ, ಡಾ. ಸುರೇಶ ಹಕ್ಕಂಡಿ, ಡಾ. ಗವಿ ಪಾಟೀಲ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಜ.15ರಿಂದ 18ರವರೆಗೆ 4 ದಿನಗಳ ಕಾಲ ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾಘಟಕ, ಕೊಪ್ಪಳ ಇವುಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ಹಮ್ಮಿಕೊಳ್ಳಲಾಗಿದೆ.
ಬೃಹತ್ ರಕ್ತದಾನ ಶಿಬಿರದಲ್ಲಿ ಸಂಚಾರಿ ವಾಹನದಲ್ಲಿ-69 ಹಾಗೂ ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ 34 ಒಟ್ಟು 103 ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9060896550 ಸಂಪರ್ಕಿಸಲು ಗವಿಮಠದ ಪ್ರಕಟಣೆ ತಿಳಿಸಿದೆ.