ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಅನ್ನದಾನ, ವಿದ್ಯಾದಾನ, ನೇತ್ರದಾನಗಳಷ್ಟೇ ರಕ್ತದಾನ ಪವಿತ್ರ ಮತ್ತು ಶ್ರೇಷ್ಠದಾನವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸಬೇಕೆಂದು ನಗರದ ಶೇಖರ್ ರಕ್ತ ನಿಧಿ ಕೇಂದ್ರದ ಡಾ. ಸೋಮಶೇಖರ್ ತಿಳಿಸಿದರು.ನಗರದ ಶ್ರೀ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೆರೆಗೋಡಿ- ರಂಗಾಪುರ ಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿಯವರ 73ನೇ ಜನ್ಮ ವರ್ದಂತಿ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕ ಸೇವೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು ಪ್ರತಿಯೊಬ್ಬರೂ ಇಂತಹ ಕಾರ್ಯಗಳಲ್ಲಿ ಭಾಗವಹಿಸಿ ತಮ್ಮ ಕೈಲಾದ ಸೇವೆ ಸಲ್ಲಿಸಬೇಕಿದೆ. ಜಗತ್ತಿನಲ್ಲಿ ಕೃತಕವಾಗಿ ಏನು ಬೇಕಾದರೂ ಸೃಷ್ಟಿಸಬಹುದು. ಆದರೆ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲವಾದ್ದರಿಂದ ರಕ್ತದಾನ ಮಹಾದಾನವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡಿ ಈ ಕಾರ್ಯದಲ್ಲಿ ಭಾಗಿಯಾಗಿ ಮತ್ತೊಂದು ಜೀವ ಉಳಿಸಬೇಕು. ರಕ್ತ ನೀಡುವುದರಿಂದ ಅಷ್ಟೇ ರಕ್ತ ಮತ್ತೆ ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ರಕ್ತ ನೀಡುವುದರಿಂದ ಹೃದಯಾಘಾತವಾಗುವ ಸಂಭವ ಕಡಿಮೆ ಇದ್ದು, ಹೊಸ ಚೈತನ್ಯ ಮೂಡಲಿದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕೆಂದರು. ತಿಪಟೂರಿನಲ್ಲಿ ಬ್ಲಡ್ ಬ್ಯಾಂಕ್ ತೆರೆಯಲಾಗಿದ್ದು ಇದರಿಂದ ತುರ್ತು ಚಿಕಿತ್ಸೆಗೆಂದು ಬೇರೆ ಕಡೆ ಅಲೆದಾಡುವುದನ್ನು ತಪ್ಪಿಸಿದಂತಾಗಿದೆ. ವಿದ್ಯಾರ್ಥಿಗಳಾದ ನೀವು ಸಮಾಜದ ಭಾಗವಾಗಿದ್ದು ಇಂತಹ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ಬಾಗಿಯಾಗುವ ಗುಣವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಕಲಿತುಕೊಳ್ಳಬೇಕೆಂದರು.
ಶ್ರೀರಂಗ ಆಸ್ಪತ್ರೆಯ ಡಾ. ವಿವೇಚನ್ ಮಾತನಾಡಿ, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದರೂ ರಕ್ತದಾನ ಮಾಡುವಲ್ಲಿ ಯಾರೂ ಸಹ ಮುಂದಾಗುತ್ತಿಲ್ಲ. ಇದರಿಂದ ಯಾವುದೇ ತೊಂದರೆಯಾಗದೆ ಅವರ ಆರೋಗ್ಯ ಮತ್ತಷ್ಟು ಸುಧಾರಿಸಲಿದ್ದು ಸಾಧ್ಯವಾದಷ್ಟು ರಕ್ತದಾನ ಮಾಡಿ ಪುಣ್ಯದ ಕೆಲಸದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಎಚ್.ಪಿ ಭರತ್ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದಲ್ಲಿ ಅವರು ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕೆಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಶಿಬಿರದಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದರು.
ಕುಮಾರ್ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.