ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ರಕ್ತದಾನ ಆರೋಗ್ಯಕ್ಕೆ ಪೂರಕ ಎಂದು ಕಲ್ಕೆರೆ ಮಠದ ಬಸವಲಿಂಗಸ್ವಾಮಿ ಹೇಳಿದರು.ವೀರಶೈವ ಸಮಾಜ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಸಹಯೋಗದೊಂದಿಗೆ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಪ್ರಯಕ್ತ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯುವಕ-ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಜೀವ ಉಳಿಯುತ್ತದೆ. ಕೆಟ್ಟ ಹವ್ಯಾಸಗಳನ್ನು ಕಲಿಯುವ ಬದಲು ರಕ್ತದಾನ ಮಾಡುವುದು ಒಳ್ಳೆಯದು. ಮಾನವನ ಶರೀರದ ಎಲ್ಲಾ ಅಂಗಾಂಗಗಳು ಭಗವಂತ ಕೊಟ್ಟ ವರ ಎಂದು ತಿಳಿಸಿದರು.
12 ನೇ ಶತಮಾನದ ಬಸವಣ್ಣನವರು ಸಮ ಸಮಾಜಕ್ಕಾಗಿ ಹೋರಾಡಿದವರು. ಅಂತಹವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸಬೇಕಿದೆ. ರಕ್ತದಾನ ಮಾಡಲು ಕೆಲವರು ಹಿಂಜರಿಯುತ್ತಾರೆ. ರಕ್ತದಾನದ ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸಬೇಕಿದೆ ಎಂದರು.ಜಿಲ್ಲಾ ರೆಡ್‍ಕ್ರಾಸ್ ಉಪ ಸಭಾಪತಿ ಅರುಣ್‍ಕುಮಾರ್ ಮಾತನಾಡಿ, ಚಿತ್ರದುರ್ಗದಲ್ಲಿ ಎರಡು ಹೆದ್ದಾರಿಗಳು ಹಾದು ಹೋಗಿರುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿರುತ್ತವೆ. ಹೆರಿಗೆ ಸಮಯದಲ್ಲಿ ರಕ್ತದ ಅವಶ್ಯಕತೆ ತುಂಬಾ ಮುಖ್ಯ. ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರ ಪ್ರಾಣ ಉಳಿಸಬೇಕೆಂದು ಹೇಳಿದರು. ಈ ವೇಳೆ ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಕೀರ್ತಿಕುಮಾರ್, ಚಂದ್ರಕಲ, ದೀಪಿಕ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.