ಸಾರಾಂಶ
ರಕ್ತ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಲಾಗದು. ಇದು ಶುದ್ಧ ಮಾನವೀಯ ಸೇವೆಯ ಸಂಕೇತವಾಗಿದೆ. ರಕ್ತದಾನದ ಬಗೆಗಿನ ಮೂಢನಂಬಿಕೆಯಿಂದ ಹೊರ ಬರಬೇಕು
ಬಳ್ಳಾರಿ: ಕೇಂದ್ರದ ಮಾಜಿ ಸಚಿವೆ ಬಸವರಾಜೇಶ್ವರಿಯವರ 17ನೇ ಸಂಸ್ಮರಣೆಯ ಅಂಗವಾಗಿ ನಗರದ ಬಿಐಟಿಎಂ ಮಹಾವಿದ್ಯಾಲಯದಲ್ಲಿ ಉಚಿತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬಳ್ಳಾರಿ ಶಾಖೆಯ ಉಪಾಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್, ರಕ್ತದಾನ ವ್ಯಾಪಾರದ ಅಂಗವಾಗಿ ಪರಿಗಣಿಸಬಾರದು. ರಕ್ತ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಲಾಗದು. ಇದು ಶುದ್ಧ ಮಾನವೀಯ ಸೇವೆಯ ಸಂಕೇತವಾಗಿದೆ. ರಕ್ತದಾನದ ಬಗೆಗಿನ ಮೂಢನಂಬಿಕೆಯಿಂದ ಹೊರಬರಬೇಕು. ರಕ್ತದಾನದಿಂದ ದೈಹಿಕ ನಿಶ್ಯಕ್ತಿಯಾಗುವುದಿಲ್ಲ. ಬದಲಿಗೆ ಆರೋಗ್ಯ ಮತ್ತಷ್ಟೂ ವೃದ್ಧಿಯಾಗಲಿದೆ ಎಂದರಲ್ಲದೆ, ಬಳ್ಳಾರಿಯಲ್ಲಿ 138 ಬಾರಿ ರಕ್ತದಾನ ಮಾಡಿದ ಡಾ. ನಾಗರಾಜ್, 101 ಬಾರಿ ರಕ್ತದಾನ ಮಾಡಿದ ಎಸ್‌ಬಿಐನ ನಿವೃತ್ತ ನೌಕರ ಬಿ.ದೇವಣ್ಣ ಅವರು ಮಾದರಿಯಾಗಿದ್ದಾರೆ ಎಂದು ಹೇಳಿದರು.ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎನ್. ನಾಗಭೂಷಣ ರಕ್ತದಾನದ ಮಹತ್ವ ಹಾಗೂ ಕಿಷ್ಕಿಂದ ವಿಶ್ವವಿದ್ಯಾಲಯ ನೀಡುತ್ತಿರುವ ಶೈಕ್ಷಣಿಕ ಸೇವೆ ಕುರಿತು ಮಾಹಿತಿ ನೀಡಿದರು.
ನಾವು ಪ್ರತಿ ಬಾರಿ ರಕ್ತದಾನ ಮಾಡುವಾಗ,ನಾಲ್ಕು ಜೀವ ಉಳಿಸುವ ಸಾಮರ್ಥ್ಯ ಹೊಂದಿರುತ್ತೇವೆ. ಆದ್ದರಿಂದ ರಕ್ತದಾನ ಮಾಡುವುದರ ಜತೆಗೆ ಹಲವಾರು ಜೀವಗಳಿಗೆ ಮರುಜೀವನ ನೀಡಬಹುದು ಎಂದು ಬಳ್ಳಾರಿ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿ ಡಾ.ಬಿಂದುರಾಣಿ ತಿಳಿಸಿದರು.ನಿವೃತ್ತ ವೈದ್ಯ ಡಾ. ನಾಗರಾಜ್, ಡಾ. ವಿ.ಜೆ.ಭರತ್, ಡಾ. ಯು.ಈರಣ್ಣ, ಡಾ. ವಿ.ಸಿ.ಪಾಟೀಲ್, ಡಾ. ಬಿ.ಎಸ್.ಖೇಣೇದ್, ಡಾ. ಎಂ.ರಾಮಚಂದ್ರ, ಪ್ರಾಚಾರ್ಯರು, ಬಿಐಟಿಎಂ ಕಾಲೇಜಿನ ಆಡಳಿತಾಧಿಕಾರಿ ಪಿ. ಅಮರೇಶಯ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರೊ. ಸಬರಿನ್ ಹಾಗೂ ಚಂದನ ಕಾರ್ಯಕ್ರಮ ನಿರ್ವಹಿಸಿದರು.ಕೌಲ್‌ಬಜಾರ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ಹಾಗೂ ಅಶೋಕ್ ನೇತೃತ್ವದಲ್ಲಿ ಶಿಬಿರ ನಿರ್ವಹಣೆಗೊಂಡಿತು. 210ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ರಕ್ತದಾನ ಮಾಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ, ಕಿಷ್ಕಿಂದ ವಿಶ್ವವಿದ್ಯಾಲಯ, ಬಿಐಟಿಎಂ ಕಾಲೇಜು, ಬಳ್ಳಾರಿ ಬಿಸಿನೆಸ್ ಕಾಲೇಜ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ, ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.