ರಕ್ತದಾನ ನಿಜವಾದ ಜೀವದಾನ: ಪ್ರೊ.ರಾಯಪಳ್ಳೆ

| Published : Jan 13 2024, 01:30 AM IST

ಸಾರಾಂಶ

ಮಾನವನ ದೇಹದ ಜೀವಸೆಲೆಯಾದ ರಕ್ತವನ್ನು ದಾನಮಾಡಿ ಇನ್ನೊಂದು ಜೀವವನ್ನು ಉಳಿಸುವದು ಮಹತ್ಕಾರ್ಯವಾಗಿದ್ದು, ಅದು ನಿಜವಾದ ಜೀವದಾನದ ಸಂಭ್ರಮವಾಗಿದೆ ಎಂದು ಪ್ರೊ.ವಿಜಯಕುಮಾರ ರಾಯಪಳ್ಳೆ ನುಡಿದರು.

ಬಸವಕಲ್ಯಾಣ: ಮಾನವನ ದೇಹದ ಜೀವಸೆಲೆಯಾದ ರಕ್ತವನ್ನು ದಾನಮಾಡಿ ಇನ್ನೊಂದು ಜೀವವನ್ನು ಉಳಿಸುವದು ಮಹತ್ಕಾರ್ಯವಾಗಿದ್ದು, ಅದು ನಿಜವಾದ ಜೀವದಾನದ ಸಂಭ್ರಮವಾಗಿದೆ ಎಂದು ಪ್ರೊ.ವಿಜಯಕುಮಾರ ರಾಯಪಳ್ಳೆ ನುಡಿದರು.

ನಗರದ ಬಸವ ಶಿಕ್ಷಣ ಸಂಸ್ಥೆಯ ಡಾ.ಅಂಬೇಡ್ಕರ್‌ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ರಕ್ತದಾನ ಕುರಿತು ವಿಶೇಷ ಉಪನ್ಯಾಸ ನೀಡಿ, ರಕ್ತದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸಿದವರ ಮಹತ್ಕಾರ್ಯವನ್ನು ಗುರುತಿಸುವಂತಾಗಲು ಮತ್ತು ದಾನವಾಗಿ ಪಡೆದ ರಕ್ತದಿಂದ ಜೀವ ಉಳಿಸಿಕೊಂಡವರು ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ರಕ್ತದಾನ ಶ್ರೇಷ್ಠ ದಾನವಾಗಿದೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರಕ್ತದಾನ ತಪ್ಪದೇ ನೀಡಬೇಕು ಎಂದರು.

ಉಪನ್ಯಾಸಕ ನಾಗರಾಜ ಅವರು ಮಾತನಾಡಿ, ರಕ್ತ ದಾನವು ಕ್ಯಾನ್ಸರ್‌ ಅಪಾಯವನ್ನು ತಗ್ಗಿಸುತ್ತದೆ, ರಕ್ತದಾನ ಮಾಡಿದಾಗ ನಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ. ರಕ್ತದಾನದಿಂದ ನಮಗೇನೂ ನಷ್ಟವಾಗುವುದಿಲ್ಲ. ಆದರೆ ನಮ್ಮ ಆರೋಗ್ಯ ಮತ್ತು ಸಮುದಾಯದ ಆರೋಗ್ಯದ ಅನುಕೂಲಗಳಿಗೆ ಬೆಲೆ ಕಟ್ಟಲಾಗದು ಎಂದರು.

ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಶ್ರೀಧರ ಛಲವಾದಿ ಮಾತನಾಡಿ, ರಕ್ತದಾನ ನಿಜಕ್ಕೂ ದೈವಿಕ ಕ್ರಿಯೆ. ಇದು ಸಾಯುತ್ತಿರುವ ವ್ಯಕ್ತಿಯನ್ನು ಉಳಿಸುತ್ತದೆ. ಸಾಯುತ್ತಿರುವವರನ್ನು ರಕ್ಷಿಸಲು ರಕ್ತದಾನ ಮಾಡುವವರು ನಿಜವಾಗಿಯೂ ಧನ್ಯರು. ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಜನರು ಜೀವ ಉಳಿಸುವ ಪ್ರಕ್ರಿಯೆಗೆ ಕೊಡುಗೆ ನೀಡಬಹುದು ಎಂದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಧನಾಶ್ರೀ ಸ್ವಾಗತ ಗೀತೆಯನ್ನು ಭೂಮಿಕಾ ಪ್ರಸ್ತುತಪಡಿಸಿದರೆ ವಿಕಾಸ ನಿರೂಪಿಸಿ ಶಿವಪುತ್ರ ವಂದಿಸಿದರು.