ಎಲ್ಲ ದಾನಗಳಿಗಿಂತ ರಕ್ತದಾನವೇ ಶ್ರೇಷ್ಠ ಸೇವೆ

| Published : Jun 12 2024, 12:32 AM IST

ಎಲ್ಲ ದಾನಗಳಿಗಿಂತ ರಕ್ತದಾನವೇ ಶ್ರೇಷ್ಠ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ನೆಪ್ಚೂನ್ ಆಟೋ ವರ್ಕ್ಸ್‌ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದ ಗುಂಪು ಪರೀಕ್ಷೆ ಹಾಗೂ ರಕ್ತದಾನ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದಾನಗಳಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಾನವು ರಕ್ತದಾನ ಆಗಿದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವು ಇನ್ನೊಬ್ಬರ ಪ್ರಾಣ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಸ್ವಯಂಪ್ರೇರಿತ ರಕ್ತದಾನಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.

ವಿಶ್ವ ರಕ್ತದಾನಿಗಳ ದಿನ ಅಂಗವಾಗಿ ನಗರದ ನೆಪ್ಚೂನ್ ಆಟೋ ವರ್ಕ್ಸ್‌ನಲ್ಲಿ ಏರ್ಪಡಿಸಿದ್ದ ರಕ್ತದ ಗುಂಪು ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ವಿಶ್ವಾದ್ಯಂತ ಜೂನ್ 14ರಂದು ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಆರೋಗ್ಯವಂತ ಯುವಜನತೆ ರಕ್ತದಾನ ಮಾಡಬೇಕು ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಹಾಗೂ ನೆಪ್ಚೂನ್ ಆಟೋ ವರ್ಕ್ಸ್ ಸಿಬ್ಬಂದಿ, ಮಾಲೀಕರು ಹಾಗೂ ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ಪುಣ್ಯದ ಕೆಲಸ ಮಾಡಿದ್ದಾರೆ. ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ನಮ್ಮ ಸಂಸ್ಥೆಯಿಂದ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡುತ್ತ ಬಂದಿದ್ದೇವೆ. ಪ್ರಸ್ತುತ ರಕ್ತದ ಕೊರತೆ ಇರುವುದನ್ನು ನೋಡುತ್ತಿದ್ದೇವೆ. ಸಕಾಲದಲ್ಲಿ ರಕ್ತ ಸಿಗದೇ ಜೀವ ಕಳೆದುಕೊಳ್ಳುವ ಸ್ಥಿತಿ ಇರುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

64 ಬಾರಿ ರಕ್ತದಾನ ಮಾಡಿರುವ ಸೋಲಾರ್ ಮಂಜುನಾಥ್ ಅವರನ್ನು ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು. 115 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಪ್ರಮುಖರಾದ ಗುರುರಾಜ್, ಗೌತಮ್, ಎಂ.ಜಿ.ಹೆಗಡೆ, ನಂದನ್, ಎಂ.ಡಿ.ಗೀತಾ, ನಾಗರಾಜ್, ನೆಪ್ಚೂನ್ ಸಿಬ್ಬಂದಿ ಉಪಸ್ಥಿತರಿದ್ದರು.